ಸುಡಾನ್ | ಆರ್ಎಸ್ಎಫ್ ಪಡೆಗಳ ದಾಳಿಗೆ ಕನಿಷ್ಠ 100 ನಾಗರಿಕರು ಬಲಿ
ಸೇನೆ-ಅರೆಸೈನಿಕ ಪಡೆ ಸಂಘರ್ಷಕ್ಕೆ ತುತ್ತಾದ ಗ್ರಾಮಸ್ಥರು
ಸಾಂದರ್ಭಿಕ ಚಿತ್ರ | PC : NDTV
ಖಾರ್ತೂಮ್: ಕೇಂದ್ರ ಸುಡಾನ್ನ ಗ್ರಾಮವೊಂದರಲ್ಲಿ ಅರೆಸೈನಿಕ ಪಡೆ ‘ಆರ್ಎಸ್ಎಫ್’ನ ಯೋಧರು ಬುಧವಾರ ನಡೆಸಿದ ದಾಳಿಯಲ್ಲಿ ಸುಮಾರು 100 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪ್ರಜಾತಾಂತ್ರಿಕ ಕಾರ್ಯರ್ಕರು ಆಪಾದಿಸಿದ್ದಾರೆ.
ಸೇನೆಯ ಜೊತೆ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಸಂಘರ್ಷದಲ್ಲಿ ತೊಡಗಿರುವ ಆರ್ಎಸ್ಎಫ್ ಪಡೆಗಳು ಗೆಝಿರಾ ರಾಜ್ಯದ ವಾದ್ ಅಲ್-ನೌರಾ ಗ್ರಾಮದ ಮೇಲೆ ಭಾರೀ ಫಿರಂಗಿಗಳೊಂದಿಗೆ ದಾಳಿ ನಡೆಸಿದವೆಂದು ವಾದ್ ಮದನಿ ಪ್ರತಿರೋಧ ಸಮಿತಿಗಳು ವರದಿ ಮಾಡಿವೆ. ಆರ್ಎಸ್ಎಫ್ ಪಡೆಗಳ ದಾಳಿಯಲ್ಲಿ ಸಾವನ್ನಪ್ಪಿದ ಹಲವಾರು ಮಂದಿಯ ರಕ್ತಸಿಕ್ತ ಮೃತದೇಹಗಳನ್ನು ಪ್ರತಿರೋಧ ಸಮಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದು, ಇಡೀ ಹಳ್ಳಿಯೇ ಸಾಮೂಹಿಕ ಸಮಾಧಿಯಾಗಿ ಮಾರ್ಪಟ್ಟಿರುವುದಾಗಿ ಅದು ಹೇಳಿದೆ.
ಆರ್ಎಸ್ಎಫ್ ಪಡೆಗಳು ಸುಡಾನ್ನಾದ್ಯಂತ ಅದರಲ್ಲೂ ವಿಶೇಷವಾಗಿ ಅದು ಡಿಸೆಂಬರ್ನಲ್ಲಿ ವಶಪಡಿಸಿಕೊಂಡಿರುವ ಕೃಷಿ ಸಮೃದ್ಧ ರಾಜ್ಯವಾದ ಗೆಝಿರಾದ ಹಲವಾರು ಗ್ರಾಮಗಳಿಗೆ ದಿಗ್ಭಂಧನ ವಿಧಿಸಿವೆ ಹಾಗೂ ದಾಳಿಗಳನ್ನು ನಡೆಸಿದೆ. ಗೆಝಿರಾದ ರಾಜಧಾನಿ ವಾದ್ ಮದನಿಯನ್ನು ಅವು ಕಳೆದ ಡಿಸೆಂಬರ್ನಲ್ಲಿ ವಶಕ್ಕೆ ಪಡೆದುಕೊಂಡಿದ್ದವು.
ಆರ್ಎಸ್ಎಫ್ ಪಡೆಗಳು ನಾಗರಿಕರು ಮೇಲೆ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದು, ದರೋಡೆ ಕೃತ್ಯಗಳನ್ನು ನಡೆಸುತ್ತಿವೆ. ಅವುಗಳ ಆಕ್ರಮಣಕ್ಕೆ ಬೆದರಿ ಮಹಿಳೆಯರು ಹಾಗೂ ಮಕ್ಕಳು ಸಮೀಪದ ಮಾಂಗಿಲ್ ಪಟ್ಟಣದಲ್ಲಿ ಆಶ್ರಯ ಪಡೆದುಕೊಂಡಿದ್ದಾರಂದು ವಾದ್ ಮದನಿ ಪ್ರತಿರೋಧ ಸಮಿತಿಗಳು ಆಪಾದಿಸಿವೆ.