ಪಾಕಿಸ್ತಾನದ ಭದ್ರತಾ ವಾಹನದ ಮೇಲೆ ಆತ್ಮಾಹುತಿ ದಾಳಿ: ಒಂಬತ್ತು ಸೈನಿಕರು ಮೃತ್ಯು
Photo: NDtv (ಸಾಂದರ್ಭಿಕ ಚಿತ್ರ)
ಪೇಶಾವರ: ಮೋಟರ್ ಸೈಕಲ್ ನಲ್ಲಿ ಬಂದ ಆತ್ಮಹತ್ಯೆ ದಾಳಿಕೋರನೊಬ್ಬ ಪಾಕಿಸ್ತಾನದ ಭದ್ರತಾ ವಾಹನದ ಮೇಲೆ ದಾಳಿ ಮಾಡಿದ ಘಟನೆಯಲ್ಲಿ ಕನಿಷ್ಠ ಒಂಬತ್ತು ಸೈನಿಕರು ಹತರಾಗಿದ್ದಾರೆ.
ಘಟನೆಯಲ್ಲಿ ಇತರ 20 ಮಂದಿ ಗಾಯಗೊಂಡಿದ್ದಾರೆ. ಇದು ದೇಶದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಹಿಂಸಾಚಾರಕ್ಕೆ ಉದಾಹರಣೆ ಎಂದು ಸೇನೆ ಹಾಗೂ ಮೂವರು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಅಪ್ಘಾನಿಸ್ತಾನದ ಗಡಿಯ ಖೈಬರ್ ಪುಂಖ್ಟುಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಸೇನೆ ಹೇಳಿಕೆ ನೀಡಿದೆ. ಘಟನೆಯಲ್ಲಿ 5 ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಆದರೆ ಭದ್ರತಾ ಅಧಿಕಾರಿಗಳು, ಗಾಯಾಳುಗಳ ಸಂಖ್ಯೆ 20 ಎಂದು ಪ್ರಕಟಿಸಿದ್ದಾರೆ. ಮಾಧ್ಯಮ ಜತೆ ಅಧಿಕೃತವಾಗಿ ಮಾತನಾಡಲು ಅಧಿಕಾರ ಇಲ್ಲದ ಹಿನ್ನೆಲೆಯಲ್ಲಿ ಅವರು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸಿಲ್ಲ.
ಈ ಘಟನೆ ಬಗ್ಗೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲವಾದರೂ ಇದು 2022ರಿಂದೀಚೆಗೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ತಾಲಿಬಾನ್ನ ಕೃತ್ಯ ಎಂದು ಶಂಕಿಸಲಾಗಿದೆ. ಹಲವೆಡೆ ವನ್ಯಧಾಮಗಳಲ್ಲಿ ಇಂಥ ಉಗ್ರರು ಆಶ್ರಯ ಪಡೆದಿದ್ದು, ಅಪ್ಘಾನಿಸ್ತಾನದಲ್ಲಿ ಮುಕ್ತವಾಗಿಯೇ ವಾಸವಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಗ್ರರ ಬಿಗಿಹಿಡಿತ ಇದ್ದ ಉತ್ತರ ವಜೀರಿಸ್ತಾನದ ಸಮೀಪದಲ್ಲಿ ಬನ್ನು ಜಿಲ್ಲೆ ಇದೆ. ತಾಲಿಬಾನ್ ಆಡಳಿತ ಈ ಪ್ರದೇಶವನ್ನು ಸ್ಥಳೀಯ ಹಾಗೂ ವಿದೇಶಿ ಉಗ್ರರಿಂದ ಮುಕ್ತಗೊಳಿಸಲಾಗಿದೆ ಎಂದು ಹೇಳುವವರೆಗೂ ಇದು ಉಗ್ರರ ಭದ್ರ ನೆಲೆಯಾಗಿತ್ತು. ಆದಾಗ್ಯೂ ಅಪರೂಪಕ್ಕೆ ಇಂಥ ದಾಳಿ ಘಟನೆಗಳು ನಡೆಯುತ್ತಲೇ ಇವೆ. ಇದು ಸ್ಥಳೀಯ ತಾಲಿಬಾನ್ ಅಂದರೆ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ ಸಂಘಟನೆ ಈ ಪ್ರದೇಶದಲ್ಲಿ ಬಲಗೊಳ್ಳುತ್ತಿದೆ ಎನ್ನುವ ಸೂಚನೆಯಾಗಿದೆ.