ಗಗನ ನೌಕೆಯಲ್ಲಿ ತಾಂತ್ರಿಕ ದೋಷ: ಇನ್ನೂ ಕೆಲವು ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿರುವ ಸುನೀತಾ ವಿಲಿಯಮ್ಸ್
ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ (PTI)
ವಾಷಿಂಗ್ಟನ್: ಸ್ಟಾರ್ಲೈನರ್ ಗಗನ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಅದರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದ ಗಗನ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಮತ್ತೆ ಭೂಮಿಗೆ ಮರಳುವ ಬಗ್ಗೆ ಅನಿಶ್ಚಿತತೆ ತಲೆದೋರಿದೆ.
ಸ್ಟಾರ್ಲೈನರ್ ಕಾರ್ಯಾಚರಣೆಯ ಯೋಜನೆಯನ್ನು 45 ದಿನದಿಂದ 90 ದಿನಕ್ಕೆ ವಿಸ್ತರಿಸುವ ಕುರಿತು ನಾಸಾ ಯೋಜಿಸುತ್ತಿದೆ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ತಿಳಿಸಿದ್ದಾರೆ ಎಂದು CNN ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜೂನ್ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವಾಗ ಹೀಲಿಯಂ ಸೋರಿಕೆ ಹಾಗೂ ಥರ್ಸ್ಟರ್ ಸಮಸ್ಯೆಗೆ ಸಿಲುಕಿದ್ದ ಸ್ಟಾರ್ಲೈನರ್ ಗಗನ ನೌಕೆಯು ಗಗನ ಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆ ತರಲಿದೆ ಎಂದು ನಾಸಾದ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.
ಈ ನಡುವೆ, ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಇತರ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿರುವ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್, ತಮ್ಮ ದೈನಂದಿನ ಕೆಲಸಗಳನ್ನು ನಡೆಸುತ್ತಿದ್ದಾರೆ.