ತೈವಾನ್ ಕುರಿತ ಚೀನಾದ ನಿಲುವಿಗೆ ಬೆಂಬಲ : ಪುಟಿನ್
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ : ಚೀನಾವು ರಶ್ಯದ ನಿಕಟ ಮಿತ್ರನಾಗಿದ್ದು ತೈವಾನ್ ಕುರಿತ ಚೀನಾದ ನಿಲುವಿಗೆ ತನ್ನ ಬೆಂಬಲವಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಈ ವಲಯದಲ್ಲಿ ಚೀನಾವು ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂದು ನಾವು ನಂಬುವುದಿಲ್ಲ. ಹೊರಗಿನ ಬೆಂಬಲವನ್ನು ಆಕರ್ಷಿಸುವ ಸಲುವಾಗಿ ಏಶ್ಯಾದಲ್ಲಿ ಉಕ್ರೇನ್ ಶೈಲಿಯ ಬಿಕ್ಕಟ್ಟನ್ನು ಪ್ರಚೋದಿಸಲು ತೈವಾನ್ ಪ್ರಯತ್ನಿಸುತ್ತಿದೆ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.
ತೈವಾನ್ ಸುತ್ತ ಬಹಳಷ್ಟು ಘಟನೆಗಳು ನಡೆಯುತ್ತಿವೆ. ಹೌದು ತೈವಾನ್ ಚೀನಾದ ಭಾಗವಾಗಿದೆ ಎಂದು ಎಲ್ಲರೂ ಔಪಚಾರಿಕವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ? ಸಂಪೂರ್ಣ ವಿಭಿನ್ನ ಸನ್ನಿವೇಶವಿದೆ. ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಕಡೆಗೆ ಪ್ರಚೋದಿಸಲಾಗುತ್ತಿದೆ. ನಾವು ಚೀನಾವನ್ನು ಬೆಂಬಲಿಸುತ್ತೇವೆ. ಆದ್ದರಿಂದ ಚೀನಾವು ಸಂಪೂರ್ಣವಾಗಿ ಸಮಂಜಸವಾದ ನೀತಿಯನ್ನು ಅನುಸರಿಸುತ್ತಿದೆ ಎಂದು ನಂಬಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ.
ರಶ್ಯ-ಚೀನಾಗಳು ಅಧಿಕೃತ ಮಿಲಟಿರಿ ಮೈತ್ರಿಯನ್ನು ಘೋಷಿಸಿಲ್ಲ. ಆದರೆ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ 2022ರಲ್ಲಿ `ಮಿತಿಗಳಿಲ್ಲದ ಪಾಲುದಾರಿಕೆ ಒಪ್ಪಂದ'ಕ್ಕೆ ಸಹಿ ಹಾಕಿದ್ದಾರೆ. ಜತೆಗೆ, ಉಭಯ ದೇಶಗಳ ನಡುವಿನ ಸಮಗ್ರ ಪಾಲುದಾರಿಕೆ ಮತ್ತು ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು ಒಪ್ಪಿಕೊಂಡಿದ್ದಾರೆ.
ಪುಟಿನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ತೈವಾನ್ ವಿದೇಶಾಂಗ ಇಲಾಖೆ `ಚೀನಾ ಮತ್ತು ರಶ್ಯ ನಿಜವಾದ ಸಮಸ್ಯೆಗಳಾಗಿವೆ' ಎಂದಿದೆ.