ಸಿರಿಯಾ: ಕಾರು ಬಾಂಬ್ ಸ್ಫೋಟದಲ್ಲಿ 19 ಮಂದಿ ಮೃತ್ಯು; 15 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ದಮಾಸ್ಕಸ್: ಉತ್ತರ ಸಿರಿಯಾದ ಮ್ಯಾಂಬಿಜ್ ನಗರದಲ್ಲಿ ಸೋಮವಾರ ನಡೆದ ಕಾರು ಬಾಂಬ್ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು ಮೃತರಲ್ಲಿ ಹೆಚ್ಚಿನವರು ಮಹಿಳಾ ಕೃಷಿ ಕಾರ್ಮಿಕರು ಎಂದು ಸರ್ಕಾರಿ ಸ್ವಾಮ್ಯದ ಸನಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಪ್ರಾಂತದಲ್ಲಿ ಕುರ್ದಿಶ್ ಪಡೆ ಹಾಗೂ ಟರ್ಕಿ ಬೆಂಬಲಿತ ಗುಂಪಿನ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಬಳಿ ಕಾರು ಬಾಂಬ್ ಸ್ಫೋಟಿಸಿದಾಗ 18 ಮಹಿಳಾ ಕಾರ್ಮಿಕರು ಹಾಗೂ ಓರ್ವ ಪುರುಷ ಸಾವನ್ನಪ್ಪಿದ್ದಾನೆ. ದಾಳಿಯಲ್ಲಿ 15 ಮಹಿಳೆಯರು ಗಾಯಗೊಂಡಿದ್ದಾರೆ. ಕೆಲವರು ಗಂಭೀರ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ವರದಿ ಹೇಳಿದೆ.
ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ. ಯುದ್ಧದಿಂದ ಜರ್ಝರಿತಗೊಂಡ ಸಿರಿಯಾದ ಈಶಾನ್ಯ ಅಲೆಪ್ಪೋ ಪ್ರಾಂತದ ಮ್ಯಾಂಬಿಜ್ ನಗರದಲ್ಲಿ ಮೂರು ದಿನದಲ್ಲಿ ನಡೆದ ಎರಡನೇ ಕಾರು ಬಾಂಬ್ ದಾಳಿ ಇದಾಗಿದೆ. ಶನಿವಾರ ಮಿಲಿಟರಿ ನೆಲೆಯ ಬಳಿ ನಡೆದಿದ್ದ ಕಾರು ಬಾಂಬ್ ಸ್ಫೋಟದಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ. ಸಿರಿಯಾದ ಉತ್ತರ ಪ್ರಾಂತದಲ್ಲಿ ಟರ್ಕಿ ಬೆಂಬಲಿತ ಪಡೆಗಳು ಹಾಗೂ ಅಮೆರಿಕ ಬೆಂಬಲಿತ, ಕುರ್ಡಿಶ್ ನೇತೃತ್ವದ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದೆ.