ಸಿರಿಯಾ: ಘರ್ಷಣೆಯಲ್ಲಿ ಒಬ್ಬ ಮೃತ್ಯು; 9 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ದಮಾಸ್ಕಸ್: ಸಿರಿಯಾದ ನೂತನ ಆಡಳಿತಕ್ಕೆ ಸಂಯೋಜಿತವಾಗಿರುವ ಪಡೆಗಳು ಮತ್ತು ಅಲ್ಪಸಂಖ್ಯಾತ ಡ್ರೂಝ್ ಸಮುದಾಯದ ಸಶಸ್ತ್ರ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಮೃತಪಟ್ಟಿದ್ದು ಇತರ 9 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ದಮಾಸ್ಕಸ್ ಬಳಿಯ ಜರಾಮನ ನಗರದಲ್ಲಿ ಸಿರಿಯಾದ ಹೊಸ ಆಡಳಿತದ ಜತೆ ಸಂಯೋಜಿತವಾಗಿರುವ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಸಶಸ್ತ್ರ ಹೋರಾಟಗಾರರ ಗುಂಪಿನ ನಡುವೆ ಶನಿವಾರ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದು ಇತರ 9 ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಇದೇ ನಗರದ ಚೆಕ್ಪಾಯಿಂಟ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಭದ್ರತಾ ಪಡೆಯ ಸದಸ್ಯ ಮೃತಪಟ್ಟಿದ್ದು ಮತ್ತೊಬ್ಬ ಸದಸ್ಯ ಗಾಯಗೊಂಡಿದ್ದ. ರಕ್ಷಣಾ ಇಲಾಖೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನವನ್ನು ಚೆಕ್ಪಾಯಿಂಟ್ ಬಳಿ ಗುಂಪೊಂದು ತಡೆದಾಗ ಮಾತಿನ ಚಕಮಕಿ ನಡೆದಿದೆ. ರಕ್ಷಣಾ ಇಲಾಖೆಯ ಸಿಬ್ಬಂದಿ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ ಬಳಿಕ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ. ಇಂತಹ ಘಟನೆಗಳು ಸಿರಿಯಾದ ಭದ್ರತೆ, ಸ್ಥಿರತೆ ಮತ್ತು ಏಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಸಿರಿಯಾದ ಭದ್ರತಾ ಪಡೆಯ ಸ್ಥಳೀಯ ಮುಖ್ಯಾಧಿಕಾರಿ ಹೇಳಿದ್ದಾರೆ.
ಲೆಬನಾನ್, ಇಸ್ರೇಲ್ ಮತ್ತು ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ನಲ್ಲಿ ವಾಸಿಸುತ್ತಿರುವ ಡ್ರೂಝ್ ಸಮುದಾಯಕ್ಕೆ ತೊಂದರೆ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಝ್ ಸಿರಿಯಾ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.