ಸಿರಿಯಾ | ಘರ್ಷಣೆಯಲ್ಲಿ ಟರ್ಕಿ ಬೆಂಬಲಿತ ಪಡೆಯ 23 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | PC : PTI
ದಮಾಸ್ಕಸ್ : ಉತ್ತರ ಸಿರಿಯಾದ ಮಂಬಿಜ್ ಜಿಲ್ಲೆಯಲ್ಲಿ ಟರ್ಕಿ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪು ಹಾಗೂ ಕುರ್ಡಿಶ್ ಬೆಂಬಲಿತ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್(ಎಸ್ಡಿಎಫ್) ನಡುವೆ ನಡೆದ ಘರ್ಷಣೆಯಲ್ಲಿ ಟರ್ಕಿ ಬೆಂಬಲಿತ ಗುಂಪಿನ 23 ಸದಸ್ಯರ ಸಹಿತ 24 ಮಂದಿ ಸಾವನ್ನಪ್ಪಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾ ಏಜೆನ್ಸಿ ವರದಿ ಮಾಡಿದೆ.
ಮಂಜಿಬ್ನ ದಕ್ಷಿಣದ ಎರಡು ನಗರಗಳ ಮೇಲೆ ಟರ್ಕಿ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪು ದಾಳಿ ನಡೆಸಿದಾಗ ಘರ್ಷಣೆ ಭುಗಿಲೆದ್ದಿದೆ. ಎಸ್ಡಿಎಫ್ಗೆ ಸಂಯೋಜಿತ ಮಂಬಿಜ್ ಮಿಲಿಟರಿ ಕೌನ್ಸಿಲ್ನ ಸಶಸ್ತ್ರ ಹೋರಾಟಗಾರರು ನಡೆಸಿದ ಪ್ರತಿದಾಳಿಯಲ್ಲಿ ಟರ್ಕಿ ಬೆಂಬಲಿತ ಗುಂಪಿನ 23 ಮತ್ತು ಮಂಜಿಬ್ ಮಿಲಿಟರಿ ಕೌನ್ಸಿಲ್ನ ಓರ್ವ ಹೋರಾಟಗಾರ ಮೃತಪಟ್ಟಿರುವುದಾಗಿ ವರದಿ ಹೇಳಿದೆ. ಉತ್ತರ ಸಿರಿಯಾದ ಕೆಲವು ಭಾಗ ಅಮೆರಿಕ ಬೆಂಬಲಿತ ಎಸ್ಡಿಎಫ್ನ ನಿಯಂತ್ರಣದಲ್ಲಿದೆ. ಎಸ್ಡಿಎಫ್ನ ಸಹ ಘಟಕವಾದ ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್ಸ್(ವೈಪಿಜಿ)ಯನ್ನು ಭಯೋತ್ಪಾದಕ ಸಂಘಟನೆಯ ಪಟ್ಟಿಯಲ್ಲಿ ಟರ್ಕಿ ಸೇರಿಸಿದೆ.