ಸಿರಿಯಾ | ವಿವಿ ವಿದ್ಯಾರ್ಥಿ ನಿಲಯದ ಮೇಲೆ ದಾಳಿ; 4 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | Photo credit: PTI
ದಮಾಸ್ಕಸ್ : ಸಿರಿಯಾದ ಅಲೆಪ್ಪೋ ನಗರದಲ್ಲಿ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳ ಸಹಿತ 4 ಮಂದಿ ಮೃತಪಟ್ಟಿರುವುದಾಗಿ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಸನಾ ವರದಿ ಮಾಡಿದೆ.
ಉತ್ತರ ಅಲೆಪ್ಪೋ ಪ್ರದೇಶದಲ್ಲಿ ಸರಕಾರದ ನಿಯಂತ್ರಣದಲ್ಲಿರುವ ಪ್ರದೇಶದ ಮೇಲೆ ಹಯಾತ್ ತಹ್ರೀರ್ ಅಲ್-ಶಾಮ್ ಸಶಸ್ತ್ರ ಹೋರಾಟಗಾರರ ಗುಂಪು ಈ ವಾರದ ಆರಂಭದಿಂದ ನಡೆಸುತ್ತಿರುವ ಗುಂಡಿನ ದಾಳಿಯಲ್ಲಿ 240ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬುಧವಾರ ಸಶಸ್ತ್ರ ಹೋರಾಟಗಾರರ ಗುಂಪಿನ ನೇತೃತ್ವದ ಬಂಡುಕೋರ ಪಡೆ ವಾಯವ್ಯ ಸಿರಿಯಾದ ಹಲವಾರು ನಗರ ಹಾಗೂ ಗ್ರಾಮಗಳ ಮೇಲೆ ಆಕ್ರಮಣ ಆರಂಭಿಸಿದೆ. ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಸರಕಾರಿ ಪಡೆಗಳ ನಿಯಂತ್ರಣದಲ್ಲಿರುವ ಈ ಪ್ರದೇಶದಲ್ಲಿ ತೀವ್ರ ಸಂಘರ್ಷ ನಡೆಯುತ್ತಿದೆ. ಬುಧವಾರದಿಂದ ಅಲೆಪ್ಪೋ ಮತ್ತು ಇದ್ಲಿಬ್ ನಗರಗಳಲ್ಲಿ ತೀವ್ರಗೊಂಡಿರುವ ಸಂಘರ್ಷದಲ್ಲಿ 218 ಹೋರಾಟಗಾರರ ಸಹಿತ 242 ಮಂದಿ ಮೃತಪಟ್ಟಿದ್ದಾರೆ.
ಸಿರಿಯಾದ ಮಿತ್ರರಾಷ್ಟ್ರ ರಶ್ಯ ಗುರುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 24 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ಸಿರಿಯಾದಲ್ಲಿ ಅಸಾದ್ ಅವರ ಸರ್ಕಾರಿ ಪಡೆಗಳನ್ನು ರಶ್ಯ ಬೆಂಬಲಿಸುತ್ತಿದ್ದರೆ, ಸಶಸ್ತ್ರ ಬಂಡುಗೋರ ಪಡೆಯನ್ನು ಟರ್ಕಿ ಬೆಂಬಲಿಸುತ್ತಿದೆ. ಎರಡೂ ಪಡೆಗಳ ನಡುವೆ 2020ರ ಮಾರ್ಚ್ನಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟರೂ ಹಲವು ಬಾರಿ ಘರ್ಷಣೆ ನಡೆದಿದೆ.