ಸಿರಿಯಾ ಪ್ರಜೆಗಳ ಮೇಲೆ ನಡೆದ ದೌರ್ಜನ್ಯಗಳಲ್ಲಿ ಶಾಮೀಲಾದ ಅಧಿಕಾರಿಗಳ ಪಟ್ಟಿ ಶೀಘ್ರವೇ ಪ್ರಕಟ :ಎಚ್ಟಿಎಸ್ ನಾಯಕ ಜೊಲಾನಿ
ಅಬು ಮೊಹಮ್ಮದ್ ಅಲ್-ಜೊಲಾನಿ | PC : AP
ದಮಾಸ್ಕಸ್ : ಸಿರಿಯಾವನ್ನು ವಶಪಡಿಸಿಕೊಂಡಿರುವ ಬಂಡುಕೋರ ನಾಯಕ ಅಬು ಮೊಹಮ್ಮದ್ ಅಲ್-ಜೊಲಾನಿ ಅವರು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಅಸ್ಸಾದ್ ಅಳ್ವಿಕೆಯಲ್ಲಿ ಸಿರಿಯದ ಜನತೆಯ ಮೇಲೆ ನಡೆದ ದೌರ್ಜನ್ಯಗಳಲ್ಲಿ ಶಾಮೀಲಾದ ಹಿರಿಯ ಅಧಿಕಾರಿಗಳ ಪಟ್ಟಿಯೊಂದನ್ನು ನೂತನ ಆಡಳಿತವು ಪ್ರಕಟಿಸುವುದಾಗಿ ಹೇಳಿದ್ದಾರೆ.
ಯುದ್ಧಪರಾಧಗಳಲ್ಲಿ ಶಾಮೀಲಾಗಿರುವ ಹಿರಿಯ ಸೇನಾ ಹಾಗೂ ಭದ್ರತಾ ಅಧಿಕಾರಿಗಳ ಕುರಿತು ಮಾಹಿತಿಯನ್ನು ನೀಡಿದವರಿಗೆ ಬಹುಮಾನಗಳನ್ನು ಕೂಡಾ ಅವರು ಘೋಷಿಸಿದ್ದಾರೆ.
ಅಲ್ ಜೊಲಾನಿ ಅವರು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಸಕಾರದ ಜೊತೆ ಮಾತುಕತೆೆಯನ್ನು ಆರಂಭಿಸಿದ್ದಾರೆ. ‘‘ ಸಿರಿಯಾದ ಜನತೆಯ ಮೇಲೆ ನಡೆದ ದೌರ್ಜನ್ಯಗಳಲ್ಲಿ ಶಾಮೀಲಾದ ಕ್ರಿಮಿನಲ್ಗಳು, ಕೊಲೆಗಡುಕರು,ಭದ್ರತಾ ಅಧಿಕಾರಿಗಳನ್ನು ಉತ್ತರವಾದಿಗಳನ್ನಾಗಿ ಮಾಡಲು ನಾವು ಹಿಂಜರಿಯಲಾರೆವು ಎಂದು ಜೊಲಾನಿ ತಿಳಿಸಿದ್ದಾರೆ.
"ನಾವು ಕ್ರಿಮಿನಲ್ಗಳನ್ನು ಬೆನ್ನಟ್ಟುವೆವು ಮತ್ತು ಅವರನ್ನು ನಮಗೆ ಹಸ್ತಾಂತರಿಸುವಂತೆ ಅವರು ಪಲಾಯನಗೈದ ದೇಶಗಳನ್ನು ಕೇಳಿಕೊಳ್ಳಲಿದ್ದೇವೆ’’ ಎಂದು ಈಗ ತನ್ನ ನೈಜ ನಾಮಧೇಯವಾದ ಅಹ್ಮದ್ ಅಲ್-ಶರಾ ಎಂಬ ಹೆಸರನ್ನು ಬಳಸಿಕೊಳ್ಳುತ್ತಿರುವ ಜೊಲಾನಿ ಅವರು ಟೆಲಿಗ್ರಾಂನಲ್ಲಿ ಪ್ರಸಾರ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಹ್ಮದ್ ಅಲ್ ಶಾರಾ ನೇತೃತ್ವದ ತಾಹ್ರಿರ್-ಅಲ್-ಶಾಮ್ (ಎಚ್ಟಿಎಸ್) ಗುಂಪು ನವೆಂಬರ್ 27ರವರೆಗೆ ಸಿರಿಯಾದ ಇದ್ಲಿಬ್ ಪ್ರಾಂತ ಹಾಗೂ ಅದರ ನೆರೆಹೊರೆಯ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಹೊಂದಿತ್ತು. ಆನಂತರ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಅದು ಇತರ ಬಂಡುಕೋರ ಗುಂಪುಗಳ ಜೊತೆಗೂಡಿ ಸಿರಿಯಾ ಸರಕಾರದ ಅಧೀನದಲ್ಲಿರುವ ಪ್ರಾಂತಗಳನ್ನು ಸ್ವಾಧೀನಪಡಿಸಿಕೊಂಡಿತ್ತು ಹಾಗೂ ಆದಿತ್ಯವಾರದಂದು ರಾಜಧಾನಿ ಡಮಾಸ್ಕಸ್ಗೆ ಲಗ್ಗೆ ಹಾಕಿತ್ತು.
ಸಿರಿಯದಿಂದ 4 ಸಾವಿರಕ್ಕೂ ಅಧಿಕ ಇರಾನಿ ಪ್ರಜೆಗಳು ತಾಯ್ನಾಡಿಗೆ ವಾಪಸ್
ಬಶರ್ ಅಲ್ ಅಸ್ಸಾದ್ ನ್ನು ಪದಚ್ಯುತಿಗೊಳಿಸಿ ಬಂಡುಕೋರರು ದಮಾಸ್ಕಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಿರಿಯದಿಂದ 4 ಸಾವಿರಕ್ಕೂ ಅಧಿಕ ಇರಾನಿ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಇರಾನ್ ಮಂಗಳವಾರ ತಿಳಿಸಿದೆ.
ಕಳೆದ ಮೂರು ದಿನಗಳಲ್ಲಿ 4 ಸಾವಿರ ಇರಾನಿ ಪ್ರಜೆಗಳು ಇರಾನ್ಗೆ ವಾಪಸಾಗಿದ್ದಾರೆಂದು ಸರಕಾರಿ ವಕ್ತಾರರೊಬ್ಬರು ಟೆಹರಾನ್ನಲ್ಲಿ ತಿಳಿಸಿದ್ದಾರೆ.
ಬಂಡುಕೋರ ಗುಂಪುಗಳಿಂದ ಸಿರಿಯ ಜನತೆಗೆ ಉತ್ತಮ ಸಂದೇಶ ರವಾನೆ : ವಿಶ್ವಸಂಸ್ಥೆ ಪ್ರತಿನಿಧಿ ಪೆಡೆರ್ಸನ್
ಬಶರ್ ಅಸ್ಸಾದ್ ಸರಕಾರವನ್ನು ಪತನಗೊಳಿಸಿರುವ ಹಯಾತ್ ತಾಹ್ರಿರ್ ಅಲ್ ಶಾಮ್ (ಎಚ್ಟಿಎಸ್)ನೇತೃತ್ವದ ಬಂಡುಕೋರಗುಂಪುಗಳು, ಸಿರಿಯದ ನಾಗರಿಕರಿಗೆ ‘‘ಉತ್ತಮ ಸಂದೇಶ’’ವನ್ನು ನೀಡಿವೆ ಎಂದು ಸಿರಿಯದಲ್ಲಿನ ವಿಶ್ವಸಂಸ್ಥೆ ಪ್ರತಿನಿಧಿ ಜಿಯರ್ ಪೆಡೆರ್ಸನ್ ಮಂಗಳವಾರ ತಿಳಿಸಿದ್ದಾರೆ.
‘‘ ಎಚ್ ಹಾಗೂ ಇತರ ಸಶಸ್ತ್ರ ಗುಂಪುಗಳು ಸಿರಿಯದ ಪ್ರಜೆಗಳಿಗೆ ಉತ್ತಮ ಸಂದೇಶಗಳನ್ನು ಕಳುಹಿಸಿವೆಯೆಂಬುದು ಈವರೆಗಿನ ವಾಸ್ತವ. ಅವರು ಏಕತೆ ಹಾಗೂ ಎಲ್ಲರ ಒಳಗೊಳ್ಳುವಿಕೆಯ ಸಂದೇಶವನ್ನು ನೀಡುತ್ತಿದ್ದಾರೆ ’’ ಎಂದು ಪೆಡೆರ್ಸನ್ ಅವರು ಜಿನೇವಾದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.