ಎಸ್ಡಿಎಫ್ ಪ್ರಸ್ತಾಪಕ್ಕೆ ಸಿರಿಯಾ ರಕ್ಷಣಾ ಸಚಿವರ ತಿರಸ್ಕಾರ

PC : aljazeera.com
ದಮಾಸ್ಕಸ್: ದೇಶದ ಈಶಾನ್ಯದಲ್ಲಿ ನೆಲೆಸಿರುವ ಅಮೆರಿಕ ಬೆಂಬಲಿತ ಕುರ್ದಿಶ್ ಹೋರಾಟಗಾರರು ಸಮಗ್ರ ಸಿರಿಯನ್ ಪ್ರದೇಶದೊಳಗೆ ತಮ್ಮದೇ ಆದ ಮಿಲಿಟರಿ ಬಣವನ್ನು ಉಳಿಸಿಕೊಳ್ಳುವುದು ಸರಿಯಲ್ಲ ಎಂದು ಸಿರಿಯಾದ ರಕ್ಷಣಾ ಸಚಿವ ಮುರ್ಹಾಫ್ ಅಬು ಕಸ್ರಾ ಹೇಳಿದ್ದಾರೆ.
ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್(ಎಸ್ಡಿಎಫ್) ಎಂದು ಕರೆಯಲ್ಪಡುವ ಕುರ್ದಿಶ್ ಹೋರಾಟಗಾರರ ನಾಯಕತ್ವವು ಸಂಕೀರ್ಣ ಸಮಸ್ಯೆಯನ್ನು ನಿಭಾಯಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದರು.
14 ವರ್ಷಗಳ ಅಂತರ್ಯುದ್ಧದಲ್ಲಿ ಸಿರಿಯಾದಲ್ಲಿ ಅರೆ-ಸ್ವಾಯತ್ತ ಪ್ರದೇಶವನ್ನು ರೂಪಿಸುವಲ್ಲಿ ಯಶಸ್ವಿಯಾಗಿರುವ ಎಸ್ಡಿಎಫ್, ಡಿಸೆಂಬರ್ 8ರಂದು ಅಧ್ಯಕ್ಷ ಬಷರ್ ಅಸ್ಸಾದ್ರನ್ನು ಪದಚ್ಯುತಗೊಳಿಸಿದ್ದ ಮಾಜಿ ಬಂಡುಕೋರ ಪಡೆ ನೇತೃತ್ವದ ಆಡಳಿತದ ಜತೆ ಮಾತುಕತೆ ನಡೆಸುತ್ತಿದೆ. ವಿಕೇಂದ್ರಿತ ಆಡಳಿತ ತಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.
ಸಿರಿಯಾದ ರಕ್ಷಣಾ ಇಲಾಖೆಯೊಂದಿಗೆ ಸಂಯೋಜನೆಗೊಳ್ಳಲು ಎಸ್ಡಿಎಫ್ ಸಿದ್ಧವಿದೆ. ಆದರೆ ವಿಸರ್ಜನೆಗೊಳ್ಳದೆ ಮತ್ತು ಮಿಲಿಟರಿ ಬ್ಲಾಕ್ ಆಗಿ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಎಸ್ಡಿಎಫ್ ಕಮಾಂಡರ್ ಮಜ್ಲೊಮ್ ಅಬ್ದಿ ಕಳೆದ ವಾರ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು. ಈ ಪ್ರಸ್ತಾಪವನ್ನು ತಿರಸ್ಕರಿಸುವುದಾಗಿ ಮುರ್ಹಾಫ್ ಅಬು ಕಸ್ರಾ ಹೇಳಿದ್ದಾರೆ.