ಸಿರಿಯಾ ಅಧ್ಯಕ್ಷರಿಂದ ರಾಷ್ಟ್ರೀಯ ಭದ್ರತಾ ಮಂಡಳಿ ರಚನೆ

PC | NDTV
ದಮಾಸ್ಕಸ್: ಸಿರಿಯಾದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ರಚಿಸುವಂತೆ ಸೂಚಿಸಿ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಆದೇಶ ಜಾರಿಗೊಳಿಸಿದ್ದು ದೇಶಕ್ಕೆ ಎದುರಾಗುವ ಸವಾಲುಗಳು ಹಾಗೂ ದೇಶದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಧಾರಗಳನ್ನು ಸಮಿತಿ ಕೈಗೊಳ್ಳಲಿದೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.
ಈ ಮಧ್ಯೆ; ಸಿರಿಯಾ ವಿರುದ್ಧ ಜಾರಿಯಲ್ಲಿರುವ ಆರ್ಥಿಕ ದಿಗ್ಬಂಧನಗಳನ್ನು ಸಡಿಲಿಸಲು ಯೋಜಿಸಿದ್ದು ಸಿರಿಯಾಕ್ಕೆ ರಾಯಭಾರಿಯನ್ನೂ ನೇಮಿಸಲು ನಿರ್ಧರಿಸಲಾಗಿದೆ ಎಂದು ಕೆನಡಾ ಘೋಷಿಸಿದೆ. ಸಿರಿಯನ್ನರು ತನ್ನ ಎಲ್ಲಾ ನಾಗರಿಕರನ್ನು ಗೌರವಿಸುವ ಅಂತರ್ಗತ ದೇಶವನ್ನು ನಿರ್ಮಿಸಲು ಅನುವು ಮಾಡಿಕೊಡುವಲ್ಲಿ ಕೆನಡಾ ಅರ್ಥಪೂರ್ಣ ಪಾತ್ರ ನಿರ್ವಹಿಸಲಿದೆ. ಜೊತೆಗೆ, ಸಿರಿಯಾ ಅಸ್ಥಿರತೆ ಮತ್ತು ಅವ್ಯವಸ್ಥೆಯ ಬಿಕ್ಕಟ್ಟಿಗೆ ಸಿಲುಕುವುದನ್ನು ತಡೆಯಲೂ ನಾವು ನೆರವಾಗಲಿದ್ದೇವೆ ಎಂದು ಕೆನಡಾದ ವಿದೇಶಾಂಗ ಸಚಿವಾಲಯ ಹೇಳಿದೆ.
ಸಿರಿಯಾದ ಸೆಂಟ್ರಲ್ ಬ್ಯಾಂಕ್ನ ಮೂಲಕ ಹಣಗಳನ್ನು ಕಳುಹಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುವುದು. ಲೆಬನಾನ್ಗೆ ಕೆನಡಾದ ರಾಯಭಾರಿ ಸ್ಟಿಫಾನಿ ಮೆಕ್ಕಲಮ್ ಸಿರಿಯಾದ ಅನಿವಾಸಿ ರಾಯಭಾರಿಯ ಹೆಚ್ಚುವರಿ ಹೊಣೆ ವಹಿಸಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.