ಡೀಪ್‍ಸೀಕ್ ಎಐ ಸೇವೆ ಬಳಕೆಗೆ ತೈವಾನ್ ನಿಷೇಧ

ತೈಪೆ: ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ, ಸರಕಾರಿ ಏಜೆನ್ಸಿಗಳು ಮತ್ತು ನಿರ್ಣಾಯಕ ಮೂಲಸೌಕರ್ಯ ಸೇವೆ ಒದಗಿಸುವವರು ಚೀನಾದ ಕೃತಕ ಬುದ್ಧಿಮತ್ತೆ(ಎಐ) ಸ್ಟಾರ್ಟ್‍ಅಪ್ ಡೀಪ್‍ಸೀಕ್ ತಂತ್ರಜ್ಞಾನ ಬಳಸುವುದನ್ನು ತೈವಾನ್ ನಿಷೇಧಿಸಿದೆ.
ಇದರ ಕಾರ್ಯಾಚರಣೆಯು ಗಡಿಯಾಚೆಗಿನ ಪ್ರಸರಣ ಮತ್ತು ಮಾಹಿತಿ ಸೋರಿಕೆಯಂತಹ ಭದ್ರತಾ ಕಾಳಜಿಗಳನ್ನು ಒಳಗೊಂಡಿರುತ್ತದೆ ಎಂದು ಸ್ವ ಆಡಳಿತ ವ್ಯವಸ್ಥೆಯಿರುವ ದ್ವೀಪರಾಷ್ಟ್ರದ ಡಿಜಿಟಲ್ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಡೀಪ್‍ಸೀಕ್ ಜನವರಿಯಲ್ಲಿ ಬಿಡುಗಡೆಗೊಳಿಸಿದ ಹೊಸ ಓಪನ್‍ಸೋರ್ಸ್ ಎಐ ವೇದಿಕೆಯು ಮಾನವ ತಾರ್ಕಿಕತೆಯನ್ನು ಅನುಕರಿಸುತ್ತದೆ.
ಕಡಿಮೆ ವೆಚ್ಚದ ಚೀನೀ ಎಐ(ಕೃತಕ ಬುದ್ಧಿಮತ್ತೆ) ಮಾದರಿಯ ಡೀಪ್‍ಸೀಕ್‍ನ ಅನ್ವೇಷಣೆಯು ಎಐ ದೈತ್ಯ ಸಂಸ್ಥೆಗಳಾದ ಓಪನ್‍ಎಐ ಮತ್ತು ಅಲ್ಪಾಬೆಟ್‍ನ ಗೂಗಲ್‍ನ ಮಾರುಕಟ್ಟೆ ಪ್ರಾಬಲ್ಯಕ್ಕೆ ಸವಾಲೊಡ್ಡಿದೆ. ಡೀಪ್‍ಸೀಕ್ ಪರಿಚಯಿಸಿರುವ ಉಚಿತ ಎಐ ಸಹಾಯ ಸಾಧನವು ಇತರ ಎಐ ಸಂಸ್ಥೆಗಳ ಮೋಡೆಲ್‍ಗಳಿಗಿತ ಕಡಿಮೆ ವೆಚ್ಚ ಮತ್ತು ಕಡಿಮೆ ಡೇಟಾ ಬಳಕೆಯ ವೈಶಿಷ್ಟ್ಯ ಹೊಂದಿದೆ ಎಂದು ಸಂಸ್ಥೆ ಹೇಳಿದ್ದು ಇದು ಆ್ಯಪ್ ಸ್ಟೋರ್‍ನಲ್ಲಿ ಅತೀ ಹೆಚ್ಚು ಡೌನ್‍ಲೋಡ್ ಆದ ಆ್ಯಪ್ ಎಂಬ ದಾಖಲೆ ಬರೆದಿದ್ದು ಹಲವು ದೇಶಗಳಲ್ಲಿ ಜನಪ್ರಿಯಗೊಂಡಿದೆ.
ಆದರೆ ಡೀಪ್‍ಸೀಕ್‍ನ ನಾಗಾಲೋಟಕ್ಕೆ ಈಗಾಗಲೇ ಹಲವು ಅಡೆತಡೆಗಳು ಎದುರಾಗಿದ್ದು ಸರಕಾರಗಳು ಹಾಗೂ ವ್ಯವಹಾರ ಸಂಸ್ಥೆಗಳು ಅದರ ಸಂಭಾವ್ಯ ಸೈಬರ್ ಸುರಕ್ಷೆತೆಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿವೆ ಮತ್ತು ಚೀನಾದ ಹಾಂಗ್‍ಝೌ ಮೂಲದ ಈ ಸಂಸ್ಥೆಯು ಸಂಗ್ರಹಿಸುವ ಡೇಟಾ ಹಾಗೂ ಇತರ ಮಾಹಿತಿಗಳನ್ನು ಚೀನಾ ಸರಕಾರದ ಜತೆ ಹಂಚಿಕೊಳ್ಳಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿವೆ.