ತೈವಾನ್ ಜಲಸಂಧಿ: ಅಮೆರಿಕ ವಿಮಾನವನ್ನು ಎಚ್ಚರಿಸಲು ಯುದ್ಧವಿಮಾನ ಕಳಿಸಿದ ಚೀನಾ
ಬೀಜಿಂಗ್: ತೈವಾನ್ ಜಲಸಂಧಿಯ ಮೂಲಕ ಹಾರಾಟ ನಡೆಸಿದ ಅಮೆರಿಕ ನೌಕಾಪಡೆಯ ಗಸ್ತುವಿಮಾನದ ಮೇಲೆ ಕಣ್ಗಾವಲು ಇರಿಸಲು ಮತ್ತು ಎಚ್ಚರಿಸಲು ಯುದ್ಧವಿಮಾನಗಳನ್ನು ರವಾನಿಸಲಾಗಿದೆ ಎಂದು ಚೀನಾ ಹೇಳಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ತೈವಾನ್ನ ಮೇಲೆ ಚೀನಾ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಿದ್ದು ತೈವಾನ್ ತನ್ನ ಭೂಪ್ರದೇಶಕ್ಕೆ ಸೇರಿದೆ ಎನ್ನುತ್ತಿದೆ. ಆದರೆ ಅಮೆರಿಕ ಮತ್ತು ತೈವಾನ್ ಇದನ್ನು ತಿರಸ್ಕರಿಸಿದ್ದು ತೈವಾನ್ ಜಲಸಂಧಿ ಅಂತರಾಷ್ಟ್ರೀಯ ಜಲಮಾರ್ಗವಾಗಿದೆ ಎನ್ನುತ್ತಿವೆ. ‘ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗೂ ಬಳಸಬಹುದಾದ ಪಿ-8ಎ ಜಲಪ್ರದೇಶ ಗಸ್ತು ಮತ್ತು ವಿಚಕ್ಷಣ ವಿಮಾನವು ತೈವಾನ್ ಜಲಸಂಧಿಯ ಅಂತರಾಷ್ಟ್ರೀಯ ವಾಯುಮಾರ್ಗದ ಮೂಲಕ ಹಾರಾಟ ನಡೆಸಿದೆ. ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ತೈವಾನ್ ಜಲಸಂಧಿಯೊಳಗೆ ಕಾರ್ಯನಿರ್ವಹಿಸುವ ಮೂಲಕ ಅಮೆರಿಕವು ಎಲ್ಲಾ ರಾಷ್ಟ್ರಗಳ ನೌಕಾಯಾನ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ. ವಿಮಾನದ ಹಾರಾಟವು ಮುಕ್ತ ಮತ್ತು ಉಚಿತ ಇಂಡೊ-ಪೆಸಿಫಿಕ್ ಗೆ ಅಮೆರಿಕದ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಅಮೆರಿಕ ನೌಕಾಪಡೆ ಹೇಳಿದೆ.
‘ಅಮೆರಿಕ ವಿಮಾನದ ಹಾರಾಟ ಸಾರ್ವಜನಿಕ ಪ್ರಚೋದನೆಯಾಗಿದ್ದು ಇದರ ಮೇಲೆ ನಿಗಾ ವಹಿಸಲು ಮತ್ತು ಎಚ್ಚರಿಕೆ ನೀಡಲು ತನ್ನ ಯುದ್ಧವಿಮಾನ ರವಾನಿಸಲಾಗಿದೆ. ಈ ಪ್ರದೇಶದಲ್ಲಿನ ನಮ್ಮ ಸೇನಾ ತುಕಡಿ ಯಾವಾಗಲೂ ಗರಿಷ್ಟ ಎಚ್ಚರಿಕೆಯಲ್ಲಿದ್ದು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಭದ್ರತೆಯ ರಕ್ಷಣೆಗೆ ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸಲು ಬದ್ಧವಾಗಿವೆ’ ಎಂದು ಚೀನಾದ ಮಿಲಿಟರಿ ಪ್ರತಿಕ್ರಿಯೆ ನೀಡಿದೆ.