ಮಾನ್ಯತೆ ಪಡೆಯಬೇಕಾದರೆ ತಾಲಿಬಾನ್ ತನ್ನ ಬದ್ಧತೆಗಳನ್ನು ಪೂರೈಸಬೇಕು: ಅಮೆರಿಕ
Photo: NDTV
ವಾಷಿಂಗ್ಟನ್: ತಾಲಿಬಾನ್ ಕಾನೂನು ಸಮ್ಮತಿ ಪಡೆಯಬೇಕಿದ್ದರೆ ಮೊದಲು ತನ್ನ ಬದ್ಧತೆಗಳನ್ನು ಪೂರೈಸುವ ಅಗತ್ಯವಿದೆ ಎಂದು ಅಮೆರಿಕದ ಶ್ವೇತಭವನ ಹೇಳಿದೆ.
`ನಾವು ಅವರನ್ನು ಅಫ್ಘಾನಿಸ್ತಾನದಲ್ಲಿ ಆಡಳಿತ ಶಕ್ತಿಯೆಂದು ಗುರುತಿಸಿಲ್ಲ. ಅವರಿಗೆ ಅದು ಬೇಕು. ಅವರು ಆ ಕಾನೂನು ಸಮ್ಮತಿಯನ್ನು ಬಯಸಿದ್ದಾರೆ. ಆದರೆ ಅವರು ಮೊದಲು ತಮ್ಮ ಬದ್ದತೆಗಳನ್ನು ಈಡೇರಿಸಬೇಕಾಗಿದೆ' ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಮಂಗಳವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
`ನೀವು ಹೇಗೆ ಪರಿಣಾಮಕಾರಿಯಾಗಿ ಆಡಳಿತ ಮಾಡಬಹುದು, ಮೂಲಭೂತವಾಗಿ ನಿಮ್ಮ 50%ದಷ್ಟು ಉದ್ಯೋಗಿಗಳು (ಮಹಿಳೆಯರು) ಆ ಪ್ರಕ್ರಿಯೆಯ ಭಾಗವಾಗುವುದನ್ನು ನಿಷೇಧಿಸಿದಾಗ ನೀವು ಹೇಗೆ ಉಪಯುಕ್ತ ಆರ್ಥಿಕತೆಯನ್ನು ಪರಿಣಾಮಕಾರಿಯಾಗಿ ಹೊಂದಬಹುದು ಎಂಬ ಬಗ್ಗೆ ಪ್ರಶ್ನೆಗಳಿವೆ. ಆದ್ದರಿಂದ ಅವರ ಬದ್ಧತೆಗಾಗಿ ನಾವು ಅವರನ್ನು ಹೊಣೆಯಾಗಿಸುತ್ತೇವೆ ಎಂದವರು ಹೇಳಿದ್ದಾರೆ.
ತಾಲಿಬಾನ್ ಜತೆ ಅಮೆರಿಕ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂಬುದು ಇದರರ್ಥವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾನ್ ಕಿರ್ಬಿ` ಖಂಡಿತವಾಗಿಯೂ ಇಲ್ಲ. ಅಫ್ಘಾನಿಸ್ತಾನದಲ್ಲಿರುವ ನಮ್ಮ ಮಿತ್ರರು ಹಾಗೂ ಪಾಲುದಾರರನ್ನು ಅಲ್ಲಿಂದ ಹೊರತರಲು ನಾವು ಈಗಲೂ ಪ್ರಯತ್ನಿಸುತ್ತಿದ್ದೇವೆ. ಆಗ ಸಂಭಾಷಣೆ ನಡೆಯುತ್ತದೆ. ಆದರೆ 20 ವರ್ಷಗಳಿಂದ ನಮಗೆ ಸಹಾಯ ಮಾಡಿದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅಮೆರಿಕಕ್ಕೆ ಮುಖ್ಯವಾಗಿದೆ' ಎಂದು ಹೇಳಿದ್ದಾರೆ.