ಅಮೆರಿಕದಲ್ಲಿ ಶಾಲಾ ಬಾಲಕಿಯಿಂದ ಶೂಟೌಟ್; ಇಬ್ಬರು ಮೃತ್ಯು, 6 ಮಂದಿಗೆ ಗಾಯ
Photo: x.com/WAFB
ವಾಶಿಂಗ್ಟನ್: ಅಮೆರಿಕದ ವಿಸ್ಕನ್ಸಿನ್ ರಾಜ್ಯದ ಶಾಲೆಯೊಂದರಲ್ಲಿ ಹದಿಹರೆಯದ ಬಾಲಕಿಯೊಬ್ಬಳು ಗುಂಡು ಹಾರಾಟ ನಡೆಸಿದ್ದು, ತನ್ನ ಸಹಪಾಠಿ ವಿದ್ಯಾರ್ಥಿನಿ, ಶಿಕ್ಷಕಿಯನ್ನು ಹತ್ಯೆಗೈದಿದ್ದಾಳೆ ಹಾಗೂ ಇತರ ಆರು ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ, ಘಟನೆಯ ಬಳಿಕ ಶೂಟೌಟ್ ನಡೆಸಿದ ಬಾಲಕಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ವಿಸ್ಕನ್ಸಿನ್ ರಾಜಧಾನಿ ಮ್ಯಾಡಿಸನ್ನ ಆಬಂಡಂಟ್ ಲೈಫ್ ಕ್ರಿಶ್ಚಿಯನ್ ಶಾಲೆಯಲ್ಲಿ ಈ ಶೂಟೌಟ್ ನಡೆದಿದೆ. ಕಿಂಡರ್ಗಾರ್ಟನ್ನಿಂದ ಹಿಡಿದು 12ನೇ ತರಗತಿಯವರೆಗೆ 400ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಗುಂಡುಹಾರಾಟದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾದ ಗಾಯಗಳಾಗಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆಂದು ಮ್ಯಾಡಿಸನ್ ನಗರದ ಪೊಲೀಸ್ ವರಿಷ್ಠ ಶೋನ್ ಬಾರ್ನ್ಸ್ ತಿಳಿಸಿದ್ದಾರೆ. ಗುಂಡುಹಾರಾಟದಿಂದ ಇನ್ನೋರ್ವ ಶಿಕ್ಷಕಿ ಹಾಗೂ ಇತರ ಮೂವರು ವಿದ್ಯಾರ್ಥಿಗಳಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶೂಟೌಟ್ಗೆ ಹ್ಯಾಂಡ್ಗನ್ ಬಳಸಿದ್ದ ಬಾಲಕಿಯು ಆನಂತರ ಶಾಲೆಯ ಒಳಾವರಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪತ್ತೆಹಚ್ಚಿದ್ದಾರೆ.
ಗುಂಡುಹಾರಾಟ ನಡೆಸಿದ ಬಾಲಕಿಯು 17 ವರ್ಷದವಳಾಗಿದ್ದು, ಶೂಟೌಟ್ ನಡೆಸಿದ ಬಳಿಕ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಕೃತ್ಯದ ಹಿಂದೆ ಯಾವುದೇ ಉದ್ದೇಶವಿರುವಂತೆ ಕಂಡುಬರುವುದಿಲ್ಲವೆಂದು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ಹಾಗೂ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.