ಟೆಲಿಗ್ರಾಂ ಸಿಇಓ ಪಾವೆಲ್ ಡುರೋವ್ ಫ್ರಾನ್ಸ್ ನಲ್ಲಿ ಬಂಧನ: ವರದಿ
PC: x.com/WatcherGuru
ಪ್ಯಾರಿಸ್: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿರುವ ಟೆಲಿಗ್ರಾಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾವೆಲ್ ಡುರೋವ್ ಅವರನ್ನು ಶನಿವಾರ ರಾತ್ರಿ ಪ್ಯಾರೀಸ್ ನ ಹೊರವಲಯದಲ್ಲಿರುವ ಬೋರ್ಗಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಫ್ರಾನ್ಸ್ ಮಾಧ್ಯಮಗಳು ವರದಿ ಮಾಡಿವೆ.
ತಮ್ಮ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ವೇಳೆ, ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಪ್ರಾಥಮಿಕ ಪೊಲೀಸ್ ತನಿಖೆ ಸಂಬಂಧ ಅರೆಸ್ಟ್ ವಾರೆಂಟ್ ಬಾಕಿ ಇರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಟಿಎಫ್1 ವರದಿ ಮಾಡಿದೆ.
ಟೆಲಿಗ್ರಾಂನಲ್ಲಿ ಪೋಸ್ಟ್ ಮಾಡುವ ವಿಷಯಗಳ ಸಂಯೋಜಕರ ಕೊರತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ಇದಾಗಿದೆ ಎಂದು ಟಿಎಫ್1 ಹಾಗೂ ಬಿಎಫ್ಎಂ ವರದಿಯಲ್ಲಿ ಸ್ಪಷ್ಟಪಡಿಸಿವೆ. ಈ ಮೆಸೇಜಿಂಗ್ ಆ್ಯಪ್ ಮೂಲಕ ಅಪರಾಧ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ತಡೆ ಒಡ್ಡಿಲ್ಲ ಎನ್ನುವುದು ಇವರ ಮೇಲೆ ಇರುವ ಆರೋಪ.
ಅಝರ್ ಬೈಜಾನ್ ಗೆ ಪ್ರಯಾಣಿಸುತ್ತಿದ್ದ ಇವರನ್ನು ರಾತ್ರಿ 8ರ ಸುಮಾರಿಗೆ ಬಂಧಿಸಲಾಗಿದೆ. ಫೋರ್ಬ್ಸ್ ಅಂದಾಜಿನ ಪ್ರಕಾರ ಇವರ ನಿವ್ವಳ ಮೌಲ್ಯ 15.5 ಶತಕೋಟಿ ಡಾಲರ್ ಆಗಿದ್ದು, ರಷ್ಯಾವನ್ನು 2014ರಲ್ಲಿ ತೊರೆದ ಇವರು ಟೆಲಿಗ್ರಾಂ ಹುಟ್ಟುಹಾಕಿದ್ದರು. ತಾವು ನಿರ್ವಹಿಸುತ್ತಿದ್ದ ವಿಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧಿ ಸಮುದಾಯಗಳನ್ನು ನಿರ್ಬಂಧಿಸಬೇಕು ಎಂಬ ಬೇಡಿಕೆಗೆ ಬದ್ಧರಾಗಲು ನಿರಾಕರಿಸಿದ್ದರು. ಬಳಿಕ ಈ ಜಾಲತಾಣವನ್ನು ಮಾರಾಟ ಮಾಡಲಾಗಿತ್ತು. ಹಲವು ಸರ್ಕಾರಗಳಿಂದ ಒತ್ತಡವಿದ್ದರೂ, 900 ದಶಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವ ಈ ಆ್ಯಪ್ ತಟಸ್ಥ ಪ್ಲಾಟ್ ಫಾರಂ ಆಗಿ ಉಳಿಯಬೇಕು ಎನ್ನುವುದು ಇವರ ಸ್ಪಷ್ಟ ಅಭಿಪ್ರಾಯ.