ದಕ್ಷಿಣ ಕೊರಿಯಾ ಜತೆಗಿನ ಆರ್ಥಿಕ ಸಹಕಾರ ರದ್ದು: ಉತ್ತರ ಕೊರಿಯಾ ಘೋಷಣೆ
Photo:NDTV
ಪೋಂಗ್ಯಾಂಗ್: ದಕ್ಷಿಣ ಕೊರಿಯಾ ಜತೆಗಿನ ಆರ್ಥಿಕ ಸಹಕಾರ ಸಂಬಂಧವನ್ನು ರದ್ದುಗೊಳಿಸುವ ನಿರ್ಣಯವನ್ನು ಉತ್ತರ ಕೊರಿಯಾದ ಸಂಸತ್ ಅನುಮೋದಿಸಿದೆ ಎಂದು ವರದಿಯಾಗಿದೆ.
ಉಭಯ ಕೊರಿಯಾಗಳ ನಡುವಿನ ಸಂಬಂಧ ತೀವ್ರ ಹದಗೆಟ್ಟಿರುವ ನಡುವೆಯೇ ಉತ್ತರ ಕೊರಿಯಾದ `ಸುಪ್ರೀಂ ಪೀಪಲ್ಸ್ ಅಸೆಂಬ್ಲಿ'ಯು ಅಂತರ್-ಕೊರಿಯಾ ಆರ್ಥಿಕ ಸಹಕಾರವನ್ನು ರದ್ದುಗೊಳಿಸುವ ನಿರ್ಣಯವನ್ನು ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ(ಕೆಸಿಎನ್ಎ) ವರದಿ ಮಾಡಿದೆ. ಅಲ್ಲದೆ, ಈ ಹಿಂದೆ ಉಭಯ ಕೊರಿಯಾಗಳ ನಡುವಿನ ಸಹಕಾರ ಸಂಬಂಧದ ಪ್ರಮುಖ ಹೆಗ್ಗುರುತಾಗಿದ್ದ `ಕುಮ್ಗಾಂಗ್ ಪರ್ವತ ಪ್ರವಾಸೋದ್ಯಮ ಯೋಜನೆ'ಯ ನಿರ್ವಹಣೆಗೆ ಸಂಬಂಧಿಸಿದ ವಿಶೇಷ ಕಾನೂನನ್ನು ರದ್ದುಗೊಳಿಸುವ ಯೋಜನೆಗೂ ಸಂಸತ್ ಅನುಮೋದನೆ ನೀಡಿದೆ. ಉತ್ತರ ಕೊರಿಯಾದ ರಮಣೀಯ ಪರ್ವತ ಪ್ರದೇಶದಲ್ಲಿ ದಕ್ಷಿಣ ಕೊರಿಯಾದ ಹ್ಯುಂಡೈ ಅಸಾನ್ ಸಂಸ್ಥೆ ನಿರ್ಮಿಸಿರುವ ಈ ರೆಸಾರ್ಟ್ ಪ್ರತೀ ವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೀಗ ಉತ್ತರ ಕೊರಿಯಾ- ರಶ್ಯ ಇನ್ನಷ್ಟು ನಿಕಟವಾಗಿರುವುದರಿಂದ ಬಳಿಕ ರಶ್ಯದ ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.