ಭಾರತೀಯ ಪ್ರವಾಸಿಗರಿಗೆ ವೀಸಾ ಅಗತ್ಯವಿಲ್ಲ: ಥೈಲ್ಯಾಂಡ್ ಘೋಷಣೆ
Photo: PTI
ಬ್ಯಾಂಕಾಕ್: ಥೈಲ್ಯಾಂಡ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ 2024ರ ಮೇ ತಿಂಗಳಿನವರೆಗೆ ವೀಸಾ ಅಗತ್ಯವನ್ನು ಮನ್ನಾ ಮಾಡುವುದಾಗಿ ಥೈಲ್ಯಾಂಡ್ ಅಧಿಕಾರಿಗಳು ಮಂಗಳವಾರ ಘೋಷಿಸಿದ್ದಾರೆ. ದೇಶಕ್ಕೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಇದಾಗಿದೆ.
ಕಳೆದ ಸೆಪ್ಟಂಬರ್ ನಲ್ಲಿ ಚೀನಾದ ಪ್ರವಾಸಿಗರಿಗೆ ವೀಸಾ ಅಗತ್ಯವನ್ನು ಥೈಲ್ಯಾಂಡ್ ಮನ್ನಾ ಮಾಡಿತ್ತು. ಭಾರತ ಮತ್ತು ತೈವಾನ್ ನಿಂದ ಆಗಮಿಸುವವರು ವೀಸಾದ ಅಗತ್ಯವಿಲ್ಲದೆ 30 ದಿನ ಥೈಲ್ಯಾಂಡ್ ನಲ್ಲಿ ಇರಬಹುದು ಎಂದು ಸರಕಾರದ ವಕ್ತಾರ ಚಾಯ್ ವಚರೋಂಕ್ ಹೇಳಿದ್ದಾರೆ. ಮಲೇಶ್ಯಾ, ಚೀನಾ, ದಕ್ಷಿಣ ಕೊರಿಯಾ ಮತ್ತು ಭಾರತದಿಂದ ಥೈಲ್ಯಾಂಡ್ ಗೆ ಅತ್ಯಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ.
ಈ ವರ್ಷ ಭಾರತದಿಂದ 1.2 ದಶಲಕ್ಷ ಜನತೆ ಥೈಲ್ಯಾಂಡ್ ಗೆ ಭೇಟಿ ನೀಡಿದ್ದಾರೆ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದ ಉಪಕ್ರಮ ಇದಾಗಿದೆ. ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ 2019ರಲ್ಲಿ ಥೈಲ್ಯಾಂಡ್ ಗೆ ದಾಖಲೆ ಸಂಖ್ಯೆಯ 39 ದಶಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಈ ವರ್ಷದ ಜನವರಿಯಿಂದ ಅಕ್ಟೋಬರ್ 29ರವರೆಗೆ ಥೈಲ್ಯಾಂಡ್ ಗೆ 22 ದಶಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು 25.67 ಶತಕೋಟಿ ಡಾಲರ್ ವಿದೇಶಿ ವಿನಿಮಯ ಸಂಗ್ರಹಗೊಂಡಿದೆ.