ಥೈಲ್ಯಾಂಡ್: ರಾಜಪ್ರಭುತ್ವವನ್ನು ಟೀಕಿಸಿದ್ದ ವ್ಯಕ್ತಿಗೆ 50 ವರ್ಷ ಜೈಲುಶಿಕ್ಷೆ
Photo:NDTV
ಬ್ಯಾಂಕಾಕ್: ರಾಜಪ್ರಭುತ್ವವನ್ನು ಟೀಕಿಸಿದ್ದ ಥೈಲ್ಯಾಂಡ್ನ ವ್ಯಕ್ತಿಗೆ 50 ವರ್ಷ ಜೈಲುಶಿಕ್ಷೆ ವಿಧಿಸಲಾಗಿದ್ದು ಇದು ರಾಜಪ್ರಭುತ್ವ ಅವಹೇಳನ ಕಾಯ್ದೆಯಡಿ ನೀಡಿರುವ ಗರಿಷ್ಟ ಶಿಕ್ಷೆಯೆಂಬ ದಾಖಲೆ ಬರೆದಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಪರ ಕಾರ್ಯಕರ್ತ ಮೋಂಗ್ಕೊಲ್ ಥಿರಕೋಟ್(30 ವರ್ಷ) ಈ ದಾಖಲೆಯ ಶಿಕ್ಷೆಗೊಳಗಾದವರು. ರಾಜಕೀಯ ಕೈದಿಗಳ ಬಿಡುಗಡೆಗೆ ಆಗ್ರಹಿಸಿ 2021ರಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭ ಥಿರಕೋಟ್ ಬಂಧನವಾಗಿತ್ತು. ರಾಜಪ್ರಭುತ್ವದ ಕಠಿಣ ನಿಯಮಗಳನ್ನು ಸಡಿಲಿಸುವಂತೆ ಆಗ್ರಹಿಸಿ ಥೈಲ್ಯಾಂಡ್ನಲ್ಲಿ 2020 ಮತ್ತು 2021ರಲ್ಲಿ ಸಾವಿರಾರು ಯುವಜನತೆ ಬೀದಿಗಳಿದು ಪ್ರತಿಭಟನೆ ನಡೆಸಿದ್ದು 250ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
ಥಿರಕೋಟ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ರಾಜಪ್ರಭುತ್ವವನ್ನು ಅವಮಾನಿಸುವ ಮತ್ತು ಪ್ರಚೋದನಕಾರಿ ಹೇಳಿಕೆ ಪೋಸ್ಟ್ ಮಾಡಿರುವುದರಿಂದ ಕ್ರಿಮಿನಲ್ ನ್ಯಾಯಾಲಯ 28 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಪೀಲು ಕೋರ್ಟ್ಗೆ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಸಂದರ್ಭ ಥಿರಕೋಟ್ ವಿರುದ್ಧ ಇನ್ನೂ 11 ಆರೋಪ ಸಾಬೀತಾಗಿದ್ದರಿಂದ ಶಿಕ್ಷೆಯನ್ನು 50 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.
ಇದೀಗ ಶಿಕ್ಷೆಯನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಥಿರಕೋಟ್ ಪರ ನ್ಯಾಯವಾದಿಗಳು ಹೇಳಿದ್ದಾರೆ.