ಇಸ್ರೇಲ್ ರಾಯಭಾರ ಕಚೇರಿ ಮುಚ್ಚುವ ನಿರ್ಣಯಕ್ಕೆ ದ.ಆಫ್ರಿಕಾ ಸಂಸತ್ ಅನುಮೋದನೆ
Photo: twitter.com/QNAEnglish
ಕೇಪ್ಟೌನ್: ಗಾಝಾದಲ್ಲಿ ಕದನವಿರಾಮಕ್ಕೆ ಇಸ್ರೇಲ್ ಒಪ್ಪುವ ತನಕ ಆ ದೇಶದ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವ ಜತೆಗೆ ಇಸ್ರೇಲ್ ರಾಯಭಾರ ಕಚೇರಿಯನ್ನು ಮುಚ್ಚಬೇಕು ಎಂಬ ನಿರ್ಣಯವನ್ನು ದಕ್ಷಿಣ ಆಫ್ರಿಕಾದ ಸಂಸತ್ ಮಂಗಳವಾರ ಅನುಮೋದಿಸಿದೆ.
ವಿಪಕ್ಷ `ಇಕನಾಮಿಕ್ ಫ್ರೀಡಂ ಫೈಟರ್ಸ್' ಮಂಡಿಸಿದ ನಿರ್ಣಯಕ್ಕೆ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಬೆಂಬಲ ಘೋಷಿಸಿದ್ದು 248 ಸಂಸದರು ಪರವಾಗಿ ಮತ್ತು 91 ವಿರುದ್ಧ ಮತ ಚಲಾಯಿಸಿದ್ದಾರೆ. ಇದಕ್ಕೂ ಮುನ್ನ ಇಸ್ರೇಲ್ ದಕ್ಷಿಣ ಆಫ್ರಿಕಾದಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿತ್ತು.
ಗಾಝಾ ಯುದ್ಧವು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಇಕ್ಕಟ್ಟಿಗೆ ತಳ್ಳಿದ್ದು ಗಾಝಾದಲ್ಲಿ ಇಸ್ರೇಲ್ ಯುದ್ಧಾಪರಾಧ ಎಸಗುತ್ತಿರುವುದಾಗಿ ದಕ್ಷಿಣ ಆಫ್ರಿಕಾ ಭಾವಿಸುತ್ತದೆ ಎಂದು ಅಧ್ಯಕ್ಷ ಸಿರಿಲ್ ರಮಫೋಸ ಹೇಳಿಕೆ ನೀಡಿದ್ದರು. ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿದ್ದ ದಕ್ಷಿಣ ಆಫ್ರಿಕಾ, ಈ ಬಗ್ಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತನಿಖೆ ನಡೆಸಬೇಕು ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.