ಅವಘಡದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿನಿಯನ್ನು ಗೇಲಿ ಮಾಡಿದ್ದ ಅಮೆರಿಕನ್ ಪೊಲೀಸ್ ಅಧಿಕಾರಿಯ ವಜಾ
ಜಾಹ್ ನವಿ ಕಂಡುಲಾ | PC : thehindu.com
ಸಿಯಾಟಲ್ : ವಾಹನ ಅವಘಡದಲ್ಲಿ ಸಾವಿಗೀಡಾದ ಭಾರತೀಯ ವಿದ್ಯಾರ್ಥಿನಿಯ ಬಗ್ಗೆ ವ್ಯಂಗ್ಯವಾಡಿದ ಹಾಗೂ ಸಂವೇದನಾರಹಿತ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿದ್ದ ಸಿಯಾಟಲ್ ನ ಪೊಲೀಸ್ ಅಧಿಕಾರಿ ಡೇನಿಯಲ್ ಔಡೆರರ್ ನನ್ನು ಬುಧವಾರ ಸೇವೆಯಿಂದ ವಜಾಗೊಳಿಸಲಾಗಿದೆ.
23 ವರ್ಷ ವಯಸ್ಸಿನ ಜಾಹ್ ನವಿ ಕಂಡುಲಾ ಅವರು ಈ ವರ್ಷದ ಜನವರಿ 23ರಂದು ಸಿಯಾಟಲ್ ನಗರದಲ್ಲಿ ಬೀದಿಯೊಂದನ್ನು ದಾಟುತ್ತಿದ್ದಾಗ ಅವರಿಗೆ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ಚಲಾಯಿಸುತ್ತಿದ್ದ ವಾಹನವು ಡಿಕ್ಕಿ ಹೊಡೆದಿತ್ತು.ಮಾದಕದ್ರವ್ಯದ ಅತಿಯಾದ ಸೇವನೆಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ವರದಿ ಮಾಡಲು ಡೇವ್ ಅವರು ತಾಸಿಗೆ 119 ಕಿ.ಮೀ. ವೇಗದಲ್ಲಿ ವಾಹನವನ್ನು ಚಲಾಯಿಸುತ್ತಿದ್ದರು. ವೇಗದಿಂದ ಸಾಗುತ್ತಿದ್ದ ಗಸ್ತು ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಕಂಡುಲಾ ಅವರು 100 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದರು.
ಅವಘಡ ಪ್ರಕರಣದ ತನಿಖೆಯನ್ನು ನಡೆಸಿದ ಸಿಯಾಟಲ್ ನ ಪೊಲೀಸ್ ಅಧಿಕಾರಿ ಡೇನಿಯಲ್ ಔಡೆರರ್ ಅವರು ಈ ಮಾರಣಾಂತಿಕ ಅವಘಡಕ್ಕೆ ಬಲಿಯಾದ ಯುವತಿಯನ್ನು ಗೇಲಿ ಮಾಡಿದ ವೀಡಿಯೊ ಅವರು ಧರಿಸಿದ ಬಾಡಿಕ್ಯಾಮ್ ನಲ್ಲಿ ಸೆರೆಯಾಗಿತ್ತು. ‘‘ ಆಕೆ ವಾಹನದ ಕಿಟಕಿ ಗಾಜಿನ ಅಪ್ಪಳಿಸಿದ್ದಾಳೆ. ಆದರೆ ಆತ ಬ್ರೇಕ್ ಹಾಕಿದಾಗ ಆಕೆ ಕಾರಿನಿಂದಾಚೆಗೆ ಹಾರಿ ಹೋಗಿದ್ದಾಳೆ. ಆದರೆ ಆಗ ಆಕೆ ಸತ್ತುಹೋಗಿದ್ದಳು. ಅವಳೊಬ್ಬ ಸಾಮಾನ್ಯ ವ್ಯಕ್ತಿ. ಆಕೆಗೆ ಏನಿದ್ದರೂ 26 ವರ್ಷ ವಯಸ್ಸು. ನಗರಾಡಳಿತವು ಆಕೆಯ ಸಾವಿಗೆ 11 ಸಾವಿರ ಡಾಲರ್ ಪರಿಹಾರದ ಚೆಕ್ ಬರೆದುಕೊಟ್ಟರೆ ಸಾಕು’’ ಎಂದು ಔಡೆರೆರ್ ನಗೆಯಾಡಿದ್ದರು.
ಭಾರತೀಯ ಮೂಲದ ವಿದ್ಯಾರ್ಥಿನಿಯ ಸಾವನ್ನು ಗೇಲಿ ಮಾಡಿದ್ದು ಬೆಳಕಿಗೆ ಬಂದ ಬಳಿಕ ಔಡೆರೆರ್ ಅವರನ್ನು ಸಂಬಳರಹಿತ ರಜೆಯಲ್ಲಿ ಕಳುಹಿಸಿತ್ತು.
ಔಡೆರರ್ ಅವರ ನಡೆಯು ಸಿಯಾಟಲ್ ಪೊಲೀಸರು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಹೀಗಾಗಿ ಸಾರ್ವಜನಿಕ ವಿಶ್ವಾಸದ ಉನ್ನತ ಮಟ್ಟವನ್ನು ಎತ್ತಿಹಿಡಿಯುವುದು ತನ್ನ ಕರ್ತವ್ಯವೆಂದು ಸಿಯಾಟಲ್ ಪೊಲೀಸ್ಇಲಾಖೆಯ ಹಂಗಾಮಿ ಮುಖ್ಯಸ್ಥೆ ಸೂ ರಾಹರ್ ತಿಳಿಸಿದ್ದಾರೆ.