ʼಬ್ರಹ್ಮಾಂಡವನ್ನು ತಿಳಿಯುವುದೇ ಗುರಿʼ: ChatGPT ಗೆ ಸೆಡ್ಡು ಹೊಡೆಯಲು ಹೊಸ ಕಂಪೆನಿ ಪ್ರಾರಂಭಿಸಿದ ಎಲಾನ್ ಮಸ್ಕ್
ಎಲಾನ್ ಮಸ್ಕ್ | Photo : PTI
ವಾಷಿಂಗ್ಟನ್: ಬಿಲಿಯೇನರ್ ಉದ್ಯಮಿ ಎಲಾನ್ ಮಸ್ಕ್ ಬುಧವಾರ ತಮ್ಮದೇ ಆದ ಕೃತಕ ಬುದ್ಧಿಮತ್ತೆ (AI) ಕಂಪನಿ xAI ಅನ್ನು ಪ್ರಾರಂಭಿಸಿದ್ದಾರೆ. ಆ ಮೂಲಕ, ಇತ್ತೀಚೆಗೆ ಎಐ ತಂತ್ರಜ್ಞಾನ ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ChatGPTಗೆ ಸ್ಪರ್ಧೆಯೊಡ್ಡಲು ಮಸ್ಕ್ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.
ತನ್ನ ಇತರ ಕಂಪನಿಗಳಿಂದ ಪ್ರತ್ಯೇಕವಾಗಿ xAI ಕಂಪನಿಯನ್ನು ಮಸ್ಕ್ ನಡೆಸಲಿದ್ದಾರೆ xAI ವೆಬ್ಸೈಟ್ ಹೇಳಿದೆ, ಅದಾಗ್ಯೂ, xAI ಮೂಲಕ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವು ಟ್ವಿಟರ್ ಸೇರಿದಂತೆ ಇತರೆ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡಲಿದೆ ಎಂದು ಹೇಳಿದೆ.
"xAI ಯ ಗುರಿಯು ಬ್ರಹ್ಮಾಂಡದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು" ಎಂದು ಕಂಪೆನಿ ವೆಬ್ಸೈಟ್ ಹೇಳಿದೆ.
"ವಾಸ್ತವವನ್ನು ಅರ್ಥಮಾಡಿಕೊಳ್ಳುವುದು ಮತ್ತು ಜೀವನದ ದೊಡ್ಡ ಪ್ರಶ್ನೆಗಳಿಗೆ ಉತ್ತರಿಸುವುದು ಹೊಸ ಕಂಪನಿಯ ಗುರಿಯಾಗಿದೆ" ಎಂದು ಮಸ್ಕ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
OpenAI, Google DeepMind, Tesla ಮತ್ತು ಟೊರೊಂಟೊ ವಿಶ್ವವಿದ್ಯಾನಿಲಯದ ಮಾಜಿ ಸಂಶೋಧಕರು ಹೊಸ ಕಂಪೆನಿಯ ಸಿಬ್ಬಂದಿಗಳಾಗಿರಲಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿದೆ.
ಡ್ಯಾನ್ ಹೆಂಡ್ರಿಕ್ಸ್ (Dan Hendrycks) ಅವರು ತಂತ್ರಜ್ಞರಿಗೆ ಸಲಹೆ ನೀಡಲಿದ್ದು, ಅವರು ಪ್ರಸ್ತುತ AI ಸುರಕ್ಷಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಈ ಸಂಸ್ಥೆಯು, ಎಐ ತಂತ್ರಜ್ಞಾನವನ್ನು ಕ್ಷಿಪ್ರವಾಗಿ ಅಭಿವೃದ್ಧಿಪಡಿಸುವುದರ ವಿರುದ್ಧ ಎಚ್ಚರಿಕೆ ನೀಡುತ್ತಲೇ ಬಂದಿದೆ.
ಇತ್ತೀಚಿಗೆ ಹೆಂಡ್ರಿಕ್ಸ್ ಜಾಗತಿಕ ನಾಯಕರಿಗೆ ಬಹಿರಂಗ ಪತ್ರವನ್ನು ಬರೆದಿದ್ದು, ಸಾಂಕ್ರಾಮಿಕ ರೋಗ ಮತ್ತು ಪರಮಾಣು ಯುದ್ಧಕ್ಕೆ ಸಮಾನವಾಗಿ AI ಮಾನವ ಅಸ್ತಿತ್ವಕ್ಕೆ ಅಪಾಯವಾಗಿದೆ ಎಂದು ಎಚ್ಚರಿಸಿದ್ದರು.
ಎಲಾನ್ ಮಸ್ಕ್ ಕೂಡಾ AI ಯ ಅಪಾಯಗಳ ಬಗ್ಗೆ ಪದೇ ಪದೇ ಎಚ್ಚರಿಸಿದ್ದಾರೆ. ಎಐಯನ್ನು "ನಮ್ಮ ಅಸ್ತಿತ್ವಕ್ಕೆ ಅತಿದೊಡ್ಡ ಬೆದರಿಕೆ" ಎಂದು ಕರೆದಿದ್ದ ಮಸ್ಕ್, ಎಐ ಅಭಿವೃದ್ಧಿ ಕಡೆಗೆ ತುಂಬಾ ವೇಗವಾಗಿ ಚಲಿಸುವುದು "ರಾಕ್ಷಸನನ್ನು ಕರೆಸಿದಂತೆ" ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಎಲಾನ್ ಮಸ್ಕ್ ಹೊಸ ಕಂಪೆನಿ ಪ್ರಾರಂಭಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.