ನೆರವಿಗಾಗಿ ಕರೆ ಮಾಡಿದ ಕಪ್ಪುವರ್ಣೀಯ ಮಹಿಳೆಯನ್ನು ಗುಂಡಿಕ್ಕಿ ಹತ್ಯೆಗೈದ ಅಧಿಕಾರಿ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಸಂಶಯಾಸ್ಪದ ವ್ಯಕ್ತಿಯೊಬ್ಬರು ಮನೆಯ ಕಾಂಪೌಂಡ್ ಪ್ರವೇಶಿಸಿದ್ದಾನೆ ಎಂದು ನೆರವು ಯಾಚಿಸಿ ಕರೆ ಮಾಡಿದ ಕಪ್ಪುವರ್ಣೀಯ ಮಹಿಳೆಯೊಬ್ಬಳನ್ನು ಭದ್ರತಾ ಅಧಿಕಾರಿಯೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 6 ರಂದು ನಡೆದಿರುವ ಹತ್ಯೆಯ ಘಟನೆ ಅಧಿಕಾರಿ ಸೀನ್ ಗ್ರೇಸನ್ರ ಬಾಡಿ-ಕ್ಯಾಮೆರಾ(ಅಪರಾಧ ನಡೆದ ಸ್ಥಳದಲ್ಲಿಯ ಘಟನೆಗಳನ್ನು ದಾಖಲಿಸಿಕೊಳ್ಳಲು ಅಧಿಕಾರಿಗಳು ಧರಿಸುವ ಕ್ಯಾಮೆರಾ)ದಲ್ಲಿ ಸೆರೆಯಾಗಿದ್ದು ಸೋಮವಾರ ನ್ಯಾಯಾಧಿಕಾರಿಗಳು ವೀಡಿಯೊ ಬಿಡುಗಡೆಗೊಳಿಸಿದ್ದಾರೆ. ಮನೆಯ ಕಾಂಪೌಂಡ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇರುವುದಾಗಿ ಅಲ್ಲಿಯ ನಿವಾಸಿ ಸೋನ್ಯಾ ಮ್ಯಾಸೆ ಕರೆ ಮಾಡಿದ್ದು ಭದ್ರತಾ ಸಿಬ್ಬಂದಿ ಮನೆಗೆ ಧಾವಿಸಿದ್ದಾರೆ. ಮನೆಯ ಗೇಟನ್ನು ಮುರಿದು ಕಾರು ಒಳಪ್ರವೇಶಿಸಿರುವುದು ಪತ್ತೆಯಾಗಿದೆ ಆದರೆ ವ್ಯಕ್ತಿ ಅಲ್ಲಿರಲಿಲ್ಲ. ಮನೆಯೊಳಗೆ ತೆರಳಿದ ಅಧಿಕಾರಿಗಳು ಸೋನ್ಯಾ ಜತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಸೋನ್ಯಾ ಅಡುಗೆ ಮನೆಯತ್ತ ತೆರಳಲು ಮುಂದಾದಾಗ ಓರ್ವ ಅಧಿಕಾರಿ ಆಕೆಯನ್ನು ತಡೆಯಲು ಯತ್ನಿಸಿದ್ದಾರೆ. ಆದರೂ ಆಕೆ ಅಡುಗೆಮನೆಗೆ ತೆರಳಿ ಬಿಸಿನೀರಿನ ಪಾತ್ರೆಯೊಂದಿಗೆ ಬಂದಾಗ ಪಾತ್ರೆಯನ್ನು ಅಲ್ಲೇ ಇಡುವಂತೆ ಅಧಿಕಾರಿ ಗದರಿದ್ದಾರೆ. ಆಕೆ ನಿರ್ಲಕ್ಷಿಸಿದಾಗ ಹತ್ತಿರದಿಂದಲೇ ಮೂರು ಸುತ್ತು ಗುಂಡು ಹಾರಿಸಿದ್ದು ಸೋನ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತನ್ನ ಮೇಲೆ ಬಿಸಿನೀರು ಚೆಲ್ಲಲು ಮಹಿಳೆ ಮುಂದಾದಾಗ ಆತ್ಮರಕ್ಷಣೆಗೆ ಈ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿ ಮತ್ತೊಬ್ಬರಲ್ಲಿ ಹೇಳುತ್ತಿರುವುದೂ ಬಾಡಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಕೊಲೆ ಪ್ರಕರಣದ ತನಿಖೆ ಸಂದರ್ಭ ಘಟನೆಯ ವೀಡಿಯೊವನ್ನು ನ್ಯಾಯಾಧಿಕಾರಿಗಳು ಪರಿಶೀಲಿಸಿದ್ದು ಆರೋಪಿ ಸೀನ್ ಗ್ರೇಸನ್ರನ್ನು ವಶಕ್ಕೆ ಪಡೆದಿದೆ. ಅಪರಾಧ ಸಾಬೀತಾದರೆ ಗ್ರೇಸನ್ಗೆ ಜೀವಾವಧಿ ಶಿಕ್ಷೆಯಾಗಬಹುದು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.