ಅಮೆರಿಕಾದ ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು ಪುತ್ರನ ಫೊಟೋ ವೈರಲ್ ; ಭಾರಿ ಆಕ್ರೋಶ
ಗಾಝಾ ಮೇಲೆ ಮುಂದುವರಿದ ಇಸ್ರೇಲ್ ದಾಳಿ
Photo: NDTV
ಜೆರುಸಲೇಂ: ಹಮಾಸ್ ಗುಂಪು ಇಸ್ರೇಲ್ ಮೇಲೆ ನಡೆಸಿದ ಭಯಾನಕ ದಾಳಿಯ ನಂತರ ಇಸ್ರೇಲ್ ಸೇನೆಗೆ ಸುಮಾರು 4 ಲಕ್ಷ ಮಂದಿ ಇಸ್ರೇಲ್ ಯುವಕರು ಸೇರ್ಪಡೆಯಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪುತ್ರ ಯೇರ್ ಅಮೆರಿಕಾದಲ್ಲಿ ವಾಸ್ತವ್ಯ ಹೂಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ವರದಿಗಳ ಪ್ರಕಾರ, ಯೇರ್ ಈ ವರ್ಷಾರಂಭದಲ್ಲಿ ಫ್ಲೋರಿಡಾಗೆ ತಮ್ಮ ವಾಸ್ತವ್ಯ ಬದಲಿಸಿದ್ದರು. 32 ವರ್ಷದ ಯೇರ್ ಅವರು ಸಮುದ್ರ ತೀರದಲ್ಲಿ ಆನಂದದ ಕ್ಷಣಗಳನ್ನು ಕಳೆಯುತ್ತಿರುವ ಫೋಟೊ ವೈರಲ್ ಆಗಿದೆ. ಈ ಪೋಟೊಗೆ ತೀವ್ರ ಸ್ವರೂಪದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಹಮಾಸ್ ವಿರುದ್ಧ ಹೋರಾಡಲು ದೇಶವಾಸಿಗಳು ಮರಳಿ ತವರಿಗೆ ಬರುತ್ತಿದ್ದರೆ, ಯೇರ್ ಮಿಯಾಮಿ ಸಮುದ್ರ ತೀರವನ್ನು ಆನಂದಿಸುತ್ತಿದ್ದಾರೆ ಎಂದು ಟೀಕಿಸಲಾಗಿದೆ. ಆದರೆ, ಆ ಫೋಟೊದ ನೈಜತೆ ಈವರೆಗೆ ದೃಢಪಟ್ಟಿಲ್ಲ.
ಈ ಕುರಿತು The Times ಸುದ್ದಿ ಸಂಸ್ಥೆಯು ಉತ್ತರ ಇಸ್ರೇಲ್ನಲ್ಲಿ ನಿಯೋಜನೆಗೊಂಡಿರುವ ಸ್ವಯಂಸೇವಕರೊಬ್ಬರನ್ನು ಮಾತನಾಡಿಸಿದ್ದು, "ಯೇರ್ ಮಿಯಾಮಿ ಸಮುದ್ರ ತೀರದಲ್ಲಿ ತಮ್ಮ ಜೀವನವನ್ನು ಆನಂದಿಸುತ್ತಿದ್ದು, ನಮ್ಮ ದೇಶ, ಮನೆಗಳಲ್ಲಿರುವ ಕುಟುಂಬಗಳನ್ನು ರಕ್ಷಿಸಲು ನಾವು ನಮ್ಮ ಉದ್ಯೋಗಗಳು, ನಮ್ಮ ಮಕ್ಕಳನ್ನು ತೊರೆದು ಬಂದಿದ್ದೇವೆ. ಆದರೆ, ಈ ಸ್ಥಿತಿಗೆ ಕಾರಣರಾಗಿರುವ ಜನರಲ್ಲ" ಎಂದು ಯೋಧರೊಬ್ಬರು ಹೇಳಿದ್ದಾರೆ ಎಂದು ವರದಿ ಮಾಡಿದೆ.
ಕೆಲ ತಿಂಗಳ ಹಿಂದೆ ಮಹಿಳೆಯೊಬ್ಬರ ಕುರಿತು ಯೇರ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ನಿಂದಾಗಿರುವ ಹಾನಿಗಾಗಿ ಆಕೆಗೆ 34,000 ಡಾಲರ್ ಪರಿಹಾರವನ್ನು ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶಿಸಿತ್ತು. ಆ ಪೋಸ್ಟ್ನಲ್ಲಿ, ನೆತನ್ಯಾಹುಗೆ ಪ್ರತಿಸ್ಪರ್ಧಿಯಾಗಿ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಬಯಸಿರುವ ರಾಜಕಾರಣಿ ಬೆನ್ನಿ ಗಂಟ್ಝ್ರೊಂದಿಗೆ ಆ ಮಹಿಳೆಯು ಸಂಬಂಧ ಹೊಂದಿದ್ದಾರೆ ಎಂದು ಯೇರ್ ಆರೋಪಿಸಿದ್ದರು. ಈ ಪ್ರಕರಣದ ಸಂಬಂಧ ನ್ಯಾಯಾಲಯವು ಅವರ ವಿರುದ್ಧ ಪ್ರತಿಕೂಲ ತೀರ್ಪು ನೀಡಿದ ನಂತರ, ಯೇರ್ ಅಮೆರಿಕಾಗೆ ತೆರಳಿದ್ದರು.