ರಿಪಬ್ಲಿಕನ್ ಅಧ್ಯಕ್ಷೀಯ ಅಭಿಯಾನ ಟ್ರಂಪ್‍ಗೆ ಮಹತ್ವದ ಮುನ್ನಡೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳುವ ಪ್ರಕ್ರಿಯೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಮುನ್ನಡೆ ಸಾಧಿಸಿದ್ದಾರೆ.
ಅಯೋವಾ ರಾಜ್ಯದ ಕಾಕಸ್‍ನಲ್ಲಿ(ರಾಜಕೀಯ ಪಕ್ಷಗಳು ನಡೆಸುವ ಸಭೆ. ಇದರಲ್ಲಿ ಪಕ್ಷದ ಸದಸ್ಯರು ತಮ್ಮ ಅಭ್ಯರ್ಥಿಗಳನ್ನು ಚುನಾಯಿಸುತ್ತಾರೆ) ಭಾರೀ ಅಂತರದ ಗೆಲುವು ಸಾಧಿಸಿದ್ದು 51%ದಷ್ಟು ಮತ ಪಡೆಯುವ ಮೂಲಕ ಸ್ಪಷ್ಟ ಮುನ್ನಡೆ ಗಳಿಸಿದ್ದಾರೆ. ಟ್ರಂಪ್ ಅವರ ಎದುರಾಳಿಗಳಾಗಿದ್ದ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮತ್ತು ದಕ್ಷಿಣ ಕರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ಎರಡನೇ ಸ್ಥಾನ ಗಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಜೋ ಬೈಡನ್ `ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ರೇಸ್‍ನ ಈ ಹಂತದಲ್ಲಿ ಟ್ರಂಪ್ ಸ್ಪಷ್ಟವಾಗಿ ಮುನ್ನಡೆಯಲ್ಲಿದ್ದಾರೆ. 2024ರ ಚುನಾವಣೆ ಮತ್ತೆ ನಿಮ್ಮ ಮತ್ತು ನನ್ನ ನಡುವೆ ನಡೆಯುವ ನಿರೀಕ್ಷೆಯಿದೆ' ಎಂದಿದ್ದಾರೆ.
ಈ ಮಧ್ಯೆ, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯ ರೇಸ್‍ನಲ್ಲಿದ್ದ ಭಾರತೀಯ ಅಮೆರಿಕನ್ ವಿವೇಕ್ ರಾಮಸ್ವಾಮಿ, ಟ್ರಂಪ್‍ರನ್ನು ಬೆಂಬಲಿಸಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.