ನೀಲಿಚಿತ್ರ ನಟಿ ಜೊತೆಗಿನ ನಂಟನ್ನು ಮುಚ್ಚಿಹಾಕಲು ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ಗೆ ವಿನಾಯಿತಿ ನೀಡಲು ಅಮೆರಿಕ ಕೋರ್ಟ್ ನಕಾರ
ಡೊನಾಲ್ಡ್ ಟ್ರಂಪ್ | PC : PTI
ವಾಶಿಂಗ್ಟನ್,ಡಿ.17: ನೀಲಿಚಿತ್ರ ನಟಿಯೊಬ್ಬಳ ಜೊತೆಗಿನ ತನಗಿದ್ದ ಸಂಬಂಧವನ್ನು ಮುಚ್ಚಿಹಾಕಲು ಆಕೆಗೆ ಭಾರೀ ಮೊತ್ತದ ಹಣವನ್ನು ಪಾವತಿಸಿದ ಪ್ರಕರಣದಲ್ಲಿ ತನ್ನನ್ನು ದೋಷಮುಕ್ತಿಗೊಳಿಸಬೇಕೆಂದು ಕೋರಿ ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಲ್ಲಿಸಿದ ಮನವಿಯನ್ನು ನ್ಯೂಯಾರ್ಕ್ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.
ಅಧಿಕೃತವಾಗಿ ನಡೆಸುವ ಕೃತ್ಯಗಳ ಕುರಿತಾಗಿ ಅಧ್ಯಕ್ಷರುಗಳಿಗೆ ದಂಡನೆಯಿಂದ ನೀಡುವ ವಿನಾಯಿತಿಯನ್ನು ಸುಪ್ರೀಂಕೋರ್ಟ್ ನಿರ್ಧಾರವು, ಅನಧಿಕೃತ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲವೆಂದು ನ್ಯಾಯಾಧೀಶ ಜುವಾನ್ ಮೆರ್ಚಾನ್ ತೀರ್ಪಿನಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದ ಈ ಆದೇಶದಿಂದಾಗಿ ಟ್ರಂಪ್ ಅವರು ದಂಡನಾತ್ಮಕ ದೋಷಿತ್ವದೊಂದಿಗೆ ಶ್ವೇತಭವನವನ್ನು ಪ್ರವೇಶಿಸಲಿರುವ ಅಮೆರಿಕದ ಮೊದಲ ಅಧ್ಯಕ್ಷರೆನಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಟ್ರಂಪ್ ವಿರುದ್ದದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ಆಲಿಕೆಯನ್ನು ನ್ಯಾಯಾಧೀಶರು ನವೆಂಬರ್ 22ರವರೆಗೆ ಮುಂದೂಡಿದ್ದರು. ಇದರಿಂದಾಗಿ ಟ್ರಂಪ್ ಅವರು ನವೆಂಬರ್ 5ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಆಸ್ಪದ ಮಾಡಿಕೊಟ್ಟಿತು.