ಕೊಲೊರಾಡೊ ಆದೇಶದ ಮೂಲಕ ಸಲಿಂಗಿಗಳ ಹಕ್ಕಿನ ವಿರುದ್ಧ ಪ್ರಹಾರ ನಡೆಸಿದ ಅಮೆರಿಕಾ ಸುಪ್ರೀಂಕೋರ್ಟ್
ವಾಷಿಂಗ್ಟನ್: ಸಲಿಂಗ ದಂಪತಿಗಳನ್ನು ಸಮಾನವಾಗಿ ನಡೆಸಿಕೊಳ್ಳುವಂತೆ ವ್ಯಾಪಾರೋದ್ಯಮಗಳು ಹಾಗೂ ಸಂಘಟನೆಗಳಿಗೆ ಕಡ್ಡಾಯಗೊಳಿಸಿರುವ ಕೊಲೊರಾಡೊ ನಾಗರಿಕ ಹಕ್ಕು ಕಾಯ್ದೆಯು ವಾಕ್ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ತೀರ್ಪು ನೀಡುವ ಮೂಲಕ ಸಲಿಂಗಿಗಳ ಮೇಲೆ ಅಮೆರಿಕಾ ಸುಪ್ರೀಂಕೋರ್ಟ್ ಭಾರಿ ಪ್ರಹಾರ ನಡೆಸಿದೆ ಎಂದು uk.news.yahoo.com ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್‌ರಿಂದ ನಾಮನಿರ್ದೇಶನಗೊಂಡಿರುವ ನೀಲ್ ಗೊರ್ಸುಚ್ ಬರೆದಿರುವ ಹಾಗೂ ಕನ್ಸರ್ವೇಟಿವ್‌ನ 6-3ರ ಭಾರಿ ಬಹುಮತ ಹೊಂದಿರುವ ಈ ತೀರ್ಪು ದಂಪತಿಗಳ ಲಿಂಗವನ್ನು ಆಧರಿಸಿ ಸೇವೆಯನ್ನು ನಿರಾಕರಿಸುವ ಅವಕಾಶವನ್ನು ವ್ಯಾಪಾರೋದ್ಯಮಗಳಿಗೆ ಒದಗಿಸಲಿದೆ. ಇದೇ ವೇಳೆ, ಗ್ರಾಹಕನ ಜನಾಂಗ, ಧರ್ಮ, ಲಿಂಗ ಅಥವಾ ಅಂಗವೈಕಲ್ಯವನ್ನು ಆಧರಿಸಿ ಸೇವೆ ನೀಡಲು ಒಪ್ಪಿಗೆ ನೀಡುವ ಅವಕಾಶವನ್ನೂ ಒದಗಿಸಿದೆ.
ಈ ಪ್ರಕರಣವನ್ನು 303 ಕ್ರಿಯೇಟಿವ್ ಕಂಪನಿಯ ಮಾಲಕಳಾದ ಲೋರಿ ಸ್ಮಿತ್ ದಾಖಲಿಸಿದ್ದರು.
ನಾನು ವೈವಾಹಿಕ ಅಂತರ್ಜಾಲ ತಾಣಗಳನ್ನು ಒದಗಿಸಲು ಬಯಸುತ್ತಿದ್ದು, ನನ್ನ ಧಾರ್ಮಿಕ ನಂಬಿಕೆಗಳ ಕಾರಣಕ್ಕೆ ಸಲಿಂಗ ದಂಪತಿಗಳಿಗೆ ವೈವಾಹಿಕ ಅಂತರ್ಜಾಲ ತಾಣಗಳನ್ನು ರೂಪಿಸಲು ಬಯಸುವುದಿಲ್ಲ ಎಂದು ಸ್ಮಿತ್ ಪ್ರತಿಪಾದಿಸಿದ್ದರು. ನನ್ನ ಅಂತರ್ಜಾಲ ತಾಣಗಳನ್ನು ಕಲೆ ಎಂದು ಪರಿಗಣಿಸಬೇಕು ಎಂದು ವಾದಿಸಿದ್ದ ಸ್ಮಿತ್, ಹೀಗಾಗಿ ಅದನ್ನು ವಾಕ್ ಸ್ವಾತಂತ್ರ್ಯ ಒದಗಿಸಿರುವ ಸಾಂವಿಧಾನಿಕ ಹಕ್ಕಿಗೆ ತರಲಾಗಿರುವ ಮೊದಲ ತಿದ್ದುಪಡಿ ಅಡಿ ರಕ್ಷಿಸಬೇಕು ಎಂದು ಪ್ರತಿಪಾದಿಸಿದ್ದರು.
ಆದರೆ, ಗ್ರಾಹಕರ ಲೈಂಗಿಕ ಆಸಕ್ತಿ, ಜನಾಂಗ ಹಾಗೂ ಅಂಗವೈಕಲ್ಯವನ್ನು ಆಧರಿಸಿ ಯಾವುದೇ ವ್ಯವಹಾರಗಳು ಸೇವೆ ನಿರಾಕರಿಸಬಾರದು ಎಂಬ ಕೊಲೊರಾಡೊ ತಾರತಮ್ಯ ವಿರೋಧಿ ಕಾಯ್ದೆಯನ್ನು ಈ ವಾದ ಉಲ್ಲಂಘಿಸುತ್ತದೆ ಎಂದು ಕೊಲೊರಾಡೊ ಸರ್ಕಾರ ಅಭಿಪ್ರಾಯ ಪಟ್ಟಿತ್ತು.
ನ್ಯಾಯಾಲಯವನ್ನು ನಿಯಂತ್ರಿಸುತ್ತಿರುವ ಐದು ಮಂದಿ ಬಲಪಂಥೀಯ ನ್ಯಾಯಾಧೀಶರ ಬೆಂಬಲ ಹೊಂದಿರುವ ನ್ಯಾಯಾಧೀಶ ಗೋರ್ಸುಚ್, "ಯಾವುದೇ ವ್ಯಕ್ತಿಯ ಮಾತು ಸಂವೇದನಾಶೀಲ ಮತ್ತು ಉತ್ತಮ ಆಶಯವುಳ್ಳದ್ದಾಗಿದೆ ಅಥವಾ ತೀವ್ರವಾಗಿ ದಾರಿ ತಪ್ಪಿಸುವಂಥದ್ದಾಗಿದೆ ಎಂದು ಸರ್ಕಾರ ಪರಿಗಣಿಸಲಿ ಅಥವಾ ಪರಿಗಣಿಸದಿರಲಿ, ವೈಯಕ್ತಿಕ ವಾಕ್ ಸ್ವಾತಂತ್ರ್ಯಕ್ಕೆ ಸಾಂವಿಧಾನಿಕ ರಕ್ಷಣೆ ಇದೆ" ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.
ಆದರೆ, ಈ ತೀರ್ಪಿಗೆ ಮೂವರು ಉದಾರವಾದಿ ನ್ಯಾಯಾಧೀಶರು ತೀವ್ರ ಭಿನ್ನಮತ ದಾಖಲಿಸಿದ್ದಾರೆ. ನ್ಯಾ. ಸೋನಿಯಾ ಸೋಟೊಮೇಯರ್ ಅವರೊಂದಿಗೆ ಭಿನ್ನಮತದ ತೀರ್ಪು ದಾಖಲಿಸಿರುವ ನ್ಯಾ. ಎಲೆನಾ ಕಗನ್ ಹಾಗೂ ಕೆತಾಂಜಿ ಬ್ರೌನ್ ಜಾಕ್ಸನ್, ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂರಕ್ಷಿತ ಗುಂಪಿಗೆ ಸೇರಿರುವ ಗ್ರಾಹಕರಿಗೆ ಸೇವೆ ನಿರಾಕರಿಸುವ ಸಾಂವಿಧಾನಿಕ ಹಕ್ಕನ್ನು ಸಾರ್ವಜನಿಕರಿಗೆ ಮುಕ್ತವಾಗಿರುವ ವ್ಯಾಪಾರೋದ್ಯಮಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ದೋಷಪೂರಿತ ತೀರ್ಪಿನ ವಿರುದ್ಧ ರಾಜಕಾರಣಿಗಳು ಹಾಗೂ ವಕೀಲರ ಗುಂಪಿನಿಂದ ಸಂಘಟಿತ ಪ್ರತಿರೋಧ ವ್ಯಕ್ತವಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್, "ಯಾವುದೇ ವ್ಯಕ್ತಿ ಆತನೇನು ಹಾಗೂ ಆತ ಯಾರನ್ನು ಪ್ರೀತಿಸುತ್ತಾನೆ ಎಂಬ ಆಧಾರದಲ್ಲಿ ಅಮೆರಿಕಾದಲ್ಲಿ ತಾರತಮ್ಯಕ್ಕೊಳಗಾಗಬಾರದು. ಸುಪ್ರೀಂಕೋರ್ಟ್ ತೀರ್ಪು ನಿರಾಶಾದಾಯಕವಾಗಿದೆ... ಈ ತೀರ್ಪು ಮೂಲಭೂತ ಸತ್ಯವನ್ನು ಮಣ್ಣು ಮಾಡಿದೆ ಹಾಗೂ ಅತ್ಯಂತ ನೋವಿನ ಸಂಗತಿಯೆಂದರೆ ಈ ತೀರ್ಪು ಪ್ರೈಡ್ ತಿಂಗಳಿನಲ್ಲಿ ಬಂದಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.