ಸಂಪುಟ ಪುನರ್ ರಚನೆ ಬೆನ್ನಲ್ಲೇ ಸುನಕ್ ಗೆ ಅವಿಶ್ವಾಸ ನಿರ್ಣಯದ ಭೀತಿ
ಲಂಡನ್: ಬ್ರಿಟನ್ ಪ್ರಧಾನಿ ರಿಶಿ ಸುನಕ್ ಅವರಿಗೆ ತಮ್ಮ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಪತ್ರದ ಬಿಸಿ ತಟ್ಟಿದೆ. ರಕ್ಷಣಾ ಸಚಿವೆ ಎ ಸುಯೆಲ್ಲಾ ಬ್ರೆವೆರ್ಮನ್ ಅವರನ್ನು ಸಂಪುಟದಿಂದ ವಜಾಗೊಳಿಸಿದ ಬೆನ್ನಲ್ಲೇ ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರವನ್ನು ಪ್ರಧಾನಿಗೆ ನೀಡಾಗಿದೆ.
ರಿಶಿ ಸುನಕ್ ಅವರ ಪಕ್ಷದ ಸದಸ್ಯೆ ಆ್ಯಂಡ್ರಿಯಾ ಜೆಂಕಿನ್ಸ್ 1922 ಸಮಿತಿ ಅಧ್ಯಕ್ಷ ಸರ್ ಗ್ರಹಾಂ ಬ್ರಾಡಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ಪ್ರಜಾಸತ್ತಾತ್ಮಕವಾಗಿ ಅಯ್ಕೆಯಾದ ಮುಖಂಡ ಬೋರಿಸ್ ಜಾನ್ಸನ್ ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಬೋರಿಸ್ ಜಾನ್ಸನ್ ಅವರನ್ನು ಹೊರಗಟ್ಟುವಂತೆ ಬಲವಂತಪಡಿಸಿರುವುದು ಮತ್ತು ನಮ್ಮ ಬೀದಿಗಳ ದಯನೀಯ ಸ್ಥಿತಿಯ ಬಗ್ಗೆ ಹಾಗೂ ಯಹೂದಿ ಸಮುದಾಯದವರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯ ಭೀತಿಯಲ್ಲಿ ಬದುಕುವಂತಾಗಿರುವ ಎರಡ ಹಂತದ ಪೊಲೀಸಿಂಗ್ ವ್ಯವಸ್ಥೆ ಬಗ್ಗೆ ಸತ್ಯವನ್ನು ಮಾತನಾಡುತ್ತಿದ್ದ ಸುಯೆಲ್ಲಾ ಅವರನ್ನು ವಜಾಗೊಳಿಸಿರುವುದು ಅಕ್ಷಮ್ಯ. ಈ ಪತ್ರವನ್ನು ಈಗಾಗಲೆ ರಿಶಿ ಸುನಾಕ್ ಅವರಿಗೆ ರವಾನಿಸಲಾಗಿದೆ ಎಂದು ಆ್ಯಂಡ್ರಿಯಾ ಸ್ಪಷ್ಟಪಡಿಸಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಶೇಕಡ 15ರಷ್ಟು ಸದಸ್ಯರು ಹೊಸ ನಾಯಕನ ಆಯ್ಕೆಯನ್ನು ಬಯಸುವ ಪತ್ರಗಳನ್ನು ಸಲ್ಲಿಸಿದರೆ, ಅಗ ಸುನಾಕ್ ಅವರು ಪಕ್ಷದಲ್ಲೇ ವಿಶ್ವಾಸಮತವನ್ನು ಯಾಚಿಸಬೇಕಾಗುತ್ತದೆ.