ಈ ವೈದ್ಯಕೀಯ ಕಾಲೇಜಿನಲ್ಲಿ ಬೋಧನಾ ಶುಲ್ಕ ಇಲ್ಲ! ಕಾರಣವೇನು ಗೊತ್ತೇ?
Photo: twitter.com/EinsteinMed
ನ್ಯೂಯಾರ್ಕ್: ಶ್ರೀಮಂತ ದಾನಿಯೊಬ್ಬರಿಂದ 100 ಕೋಟಿ ಡಾಲರ್ ದೇಣಿಗೆ ಲಭ್ಯವಾದ ಹಿನ್ನೆಲೆಯಲ್ಲಿ ಬೋಧನಾ ಶುಲ್ಕವನ್ನು ರದ್ದುಪಡಿಸಲಾಗಿದೆ ಎಂದು ನ್ಯೂಯಾರ್ಕ್ ನ ಆಲ್ಬರ್ಟ್ ಐನ್ ಸ್ಟೀನ್ ಕಾಲೇಜ್ ಆಫ್ ಮೆಡಿಸಿನ್ ನ ಮಾತೃಸಂಸ್ಥೆ ಪ್ರಕಟಿಸಿದೆ.
ಇದು ಅಮೆರಿಕದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ಬಹಿರಂಗವಾಗಿ ಸಿಗದ ಅತಿದೊಡ್ಡ ದೇಣಿಗೆಯಾಗಿದೆ. ಇದರಿಂದಾಗಿ ವಾರ್ಷಿಕ ಸುಮಾರು 60 ಸಾವಿರ ಡಾಲರ್ ವಾರ್ಷಿಕ ಬೋಧನಾ ಶುಲ್ಕ ಶೂನ್ಯವಾಗಲಿದೆ.
ಈ ವೈದ್ಯಕೀಯ ಶಾಲೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಆಸ್ಪತ್ರೆ ಮಾಂಟೆಫಿಯೊರ್ ಮೆಡಿಕಲ್ ಸೆಂಟರ್ ನ್ಯೂಯಾರ್ಕ್ ನ ಅತ್ಯಂತ ಬಡ ಪ್ರದೇಶ ಎನಿಸಿದ ಬ್ರೋಂಕ್ಸ್ ನಲ್ಲಿದೆ. ಇಲ್ಲಿ ಆರೋಗ್ಯ ಫಲಿತಾಂಶ ರಾಜ್ಯದಲ್ಲೇ ಅತ್ಯಂತ ಕಳಪೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳುತ್ತವೆ. ಈ ಘೋಷಣೆಯ ವಿಡಿಯೊ ತುಣುಕನ್ನು ಕ್ಯಾಂಪಸ್ ನಲ್ಲಿ ಬಿತ್ತರಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಪಸರಿಸಲಾಗಿದೆ. ವಿದ್ಯಾರ್ಥಿಗಳಿಂದ ತುಂಬಿದ್ದ ಈ ಸಭಾಗೃಹದಲ್ಲಿ ಈ ಘೋಷಣೆ ಮಾಡುತ್ತಿದ್ದಂತೆ ವಿದ್ಯಾರ್ಥಿಗಳ ಪ್ರಚಂಡ ಕರತಾಡನ ಹಾಗೂ ಸಂಭ್ರಮ ಮುಗಿಲು ಮುಟ್ಟಿತ್ತು.
ಐನ್ ಸ್ಟೀನ್ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಮಾಂಟೆಫಿಯೋರ್ ಮೆಡಿಕಲ್ ಸೆಂಟರ್ ನ ಆಡಳಿತ ಮಂಡಳಿ ಸದಸ್ಯ ರುತ್ ಎನ್.ಗೊಟ್ಟೆಸ್ಮನ್ ಈ ದೇಣಿಗೆ ನೀಡಿದ್ದಾರೆ. ಈ ದೊಡ್ಡ ಉಡುಗೊರೆಯಿಂದಾಗಿ ಐನ್ ಸ್ಟೀನ್ ಸಂಸ್ಥೆಯ ಯಾವುದೇ ವಿದ್ಯಾರ್ಥಿ ಬೋಧನಾ ಶುಲ್ಕವನ್ನು ಮತ್ತೆ ಪಾವತಿಸಬೇಕಿಲ್ಲ ಎಂದು ಸಂಸ್ಥೆ ಪ್ರಕಟಿಸಿದೆ.
ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಅವರ 2024ರ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ. ಮುಂದಿನ ಆಗಸ್ಟ್ ನಿಂದ ಎಲ್ಲ ವಿದ್ಯಾರ್ಥಿಗಳು ಉಚಿತ ಬೋಧನೆ ಪಡೆಯಲಿದ್ದಾರೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.