ಗುರಿ ಸಾಧಿಸುವವರೆಗೆ ಶಾಂತಿ ನೆಲೆಸದು: ವ್ಲಾದಿಮಿರ್ ಪುಟಿನ್
ವ್ಲಾದಿಮಿರ್ ಪುಟಿನ್ (PTI)
ಮಾಸ್ಕೊ: ತನ್ನ ಗುರಿ ಸಾಧನೆಯಾಗದೆ ಉಕ್ರೇನಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಈ ಉದ್ದೇಶಗಳು ಬದಲಾಗುವುದಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿದ್ದಾರೆ.
ವರ್ಷಾಂತ್ಯದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು `ಉಕ್ರೇನ್ ವಿರುದ್ಧದ ವಿಶೇಷ ಕಾರ್ಯಾಚರಣೆಯಲ್ಲಿ ರಶ್ಯಕ್ಕೆ ಯೋಧರ ಕೊರತೆ ಎದುರಾಗಿಲ್ಲ. ಆದ್ದರಿಂದ ಹೆಚ್ಚುವರಿ ಮೀಸಲು ಯೋಧರನ್ನು ಕರೆಸಿಕೊಳ್ಳುವ ಅಗತ್ಯವೇ ಇಲ್ಲ. ಉಕ್ರೇನ್ ವಿರುದ್ಧ ಈಗ ನಮ್ಮ 6,17,000 ಯೋಧರು ಕಣದಲ್ಲಿದ್ದಾರೆ ಎಂದರು.
ಈಗ ಮೀಸಲು ಯೋಧರನ್ನು ಕರೆಸಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ದೇಶದಾದ್ಯಂತ ಪ್ರತೀ ದಿನ ಸುಮಾರು 1,500 ಪುರುಷರು ರಶ್ಯನ್ ಸೇನೆಗೆ ನೇಮಕಗೊಳ್ಳುತ್ತಿದ್ದಾರೆ. ಉಕ್ರೇನ್ ಅನ್ನು ಸೇನಾ ಮುಕ್ತಗೊಳಿಸಿ ತಟಸ್ಥ ದೇಶವಾಗಿಸುವ ನಮ್ಮ ಉದ್ದೇಶ ಈಡೇರುವ ದಿನ ದೂರವಿಲ್ಲ. ಉಕ್ರೇನ್ ನೇಟೋಗೆ ಸೇರ್ಪಡೆಯಾಗದಿದ್ದರೆ ಶಾಂತಿ ನೆಲೆಸುತ್ತದೆ ಎಂದು ಪುಟಿನ್ ಪ್ರತಿಪಾದಿಸಿದರು.
ಈ ವರ್ಷ ಪುಟಿನ್ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಪತ್ರಕರ್ತರಿಗಷ್ಟೇ ಅಲ್ಲ, ಫೋನಿನ ಮೂಲಕ ಜನಸಾಮಾನ್ಯರಿಗೂ ಪ್ರಶ್ನೆ ಕೇಳುವ ಅವಕಾಶ ಸಿಕ್ಕಿತ್ತು. ಇದರಂತೆ, ರಶ್ಯ ಸ್ವಾಧೀನಪಡಿಸಿಕೊಂಡಿರುವ ಕ್ರಿಮಿಯಾ ಪ್ರಾಂತದ ಕೆಲವು ಮಕ್ಕಳು ತಮ್ಮ ಶಾಲೆಯ ಛಾವಣಿ ಸೋರುತ್ತಿರುವ ಬಗ್ಗೆ, ಆಟವಾಡಲು ತೊಂದರೆಯಾಗಿರುವ ಬಗ್ಗೆ ಪುಟಿನ್ ಗಮನ ಸೆಳೆದರೆ, ಓರ್ವ ಮಹಿಳೆ ಕ್ರಿಮಿಯಾ ಪ್ರಾಂತದಲ್ಲಿ ಮೊಟ್ಟೆಗಳ ದರ ಗಗನಕ್ಕೇರಿದ ಬಗ್ಗೆ ದೂರು ನೀಡಿದರು. ಈ ಬಗ್ಗೆ ತಕ್ಷಣ ಗಮನ ಹರಿಸುವುದಾಗಿ ಪುಟಿನ್ ಭರವಸೆ ನೀಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.