ಟ್ರಂಪ್ ಹತ್ಯೆಗೆ ಮೂರನೇ ಯತ್ನ; ಶಸ್ತ್ರ ಸಜ್ಜಿತ ವ್ಯಕ್ತಿ ಬಂಧನ
ಕೊಚೆಲ್ಲಾ ರ್ಯಾಲಿಯಲ್ಲಿ ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿ ಟ್ರಂಪ್ ಗುಂಡು ನಿರೋಧಕ ಗಾಜಿನ ಹಿಂದಿನಿಂದ ಮಾತನಾಡುತ್ತಿರುವುದು (PC: x.com/calvinrobinson)
ಕೊಚೆಲ್ಲಾ (ಅಮೆರಿಕ): ಬಂದೂಕು ಮತ್ತು ನಕಲಿ ಪಾಸ್ ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೊಚೆಲ್ಲಾ ರ್ಯಾಲಿಸ್ಥಳದಿಂದ ಕೊನೆಯ ಕ್ಷಣದಲ್ಲಿ ಬಂಧಿಸಲಾಗಿದ್ದು, ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿಯ ಹತ್ಯೆಗೆ ನಡೆದ ಮೂರನೇ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರ್ಯಾಲಿ ಸ್ಥಳದಿಂದ ಸುಮಾರು ಒಂದು ಮೈಲು ದೂರದಲ್ಲಿ ನಕಲಿ ಪ್ರವೇಶ ಪಾಸ್ ಹೊಂದಿದ್ದ ಶಂಕಿತನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಲೋಡ್ ಮಾಡಲಾಗಿದ್ದ ಶಾಟ್ ಗನ್, ಹ್ಯಾಂಡ್ ಗನ್ ಮತ್ತು ಅತ್ಯಧಿಕ ಸಾಮರ್ಥ್ಯದ ಗುಂಡು ಸಂಗ್ರಹ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಬಹುಶಃ ನಾವು ಮೂರನೇ ಹತ್ಯೆ ಯತ್ನವನ್ನು ತಡೆದಿದ್ದೇವೆ ಎಂದು ರಿವರ್ ಸೈಡ್ ಕೌಂಟಿಯ ಪೊಲೀಸ್ ಅಧಿಕಾರಿ ಚಾಡ್ ಬಿಯಾಂಕೊ ಹೇಳಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಶಂಕಿತ ವ್ಯಕ್ತಿಯನ್ನು ವೆಮ್ ಮಿಲ್ಲರ್ ಎಂದು ಗುರುತಿಸಲಾಗಿದೆ. ಈತ ನಕಲಿ ಪರ್ತಕರ್ತರ ಪಾಸ್ ಮತ್ತು ಪ್ರವೇಶ ಪಾಸ್ ಹೊಂದಿದ್ದ. ಈತ ಬಲಪಂಥೀಯ ಸರ್ಕಾರಿ ವಿರೋಧಿ ಸಂಘಟನೆಯ ಸದಸ್ಯ ಎಂದು ನಂಬಲಾಗಿದ್ದು, ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಪ್ಪು ಬಣ್ಣದ ಎಸ್ಯುವಿ ಚಾಲನೆ ಮಾಡುತ್ತಿದ್ದ 49 ವರ್ಷ ವಯಸ್ಸಿನ ಲಾಸ್ ವೇಗಸ್ ನಿವಾಸಿಯಾದ ಮಿಲ್ಲರ್ ನನ್ನು ಚೆಕ್ ಪಾಯಿಂಟ್ ನಲ್ಲಿ ಬಂಧಿಸಲಾಗಿದೆ. ಈ ಮುನ್ನ ಟ್ರಂಪ್ ಹತ್ಯೆಗೆ ಎರಡು ಪ್ರಯತ್ನಗಳು ನಡೆದಿದ್ದವು. ಕೊಚೆಲ್ಲಾ ರ್ಯಾಲಿಯಲ್ಲಿ ಟ್ರಂಪ್ ಗುಂಡು ನಿರೋಧಕ ಗಾಜಿನ ಹಿಂದಿನಿಂದ ಮಾತನಾಡಿದರು.
ಮಿಲ್ಲರ್ ರಿಪಬ್ಲಿಕನ್ ಪಕ್ಷದ ನೋಂದಾಯಿತ ಸದಸ್ಯನಾಗಿದ್ದು, ಯುಎಲ್ ಸಿಎಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ. 2022ರಲ್ಲಿ ನೆವಾಡಾದಲ್ಲಿ ಸ್ಟೇಟ್ ಅಸೆಂಬ್ಲಿಗೆ ಸ್ಪರ್ಧಿಸಲು ರೇಸ್ ನಲ್ಲಿದ್ದ.