ಅಮೆರಿಕ | ಟ್ರಂಪ್ ಆಡಳಿತದ ವಿರುದ್ಧ ಭುಗಿಲೆದ್ದ ಪ್ರತಿಭಟನೆ

PC | @YourAnonCentral
ವಾಷಿಂಗ್ಟನ್ : ಸಾರ್ವಜನಿಕ ಸೇವೆಗಳಿಗೆ ಕತ್ತರಿ ಹಾಕುವ ಮೂಲಕ ಸರ್ಕಾರದ ಗಾತ್ರವನ್ನು ಕಿರಿದುಗೊಳಿಸುವ ಮತ್ತು ವಿವಾದಾತ್ಮಕ ಸಾಮಾಜಿಕ ನೀತಿಗಳನ್ನು ವಿರೋಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ನಿಕಟ ಸಲಹೆಗಾರ ಎಲಾನ್ ಮಸ್ಕ್ ವಿರುದ್ಧ ಅಮೆರಿಕದಾದ್ಯಂತ ಶನಿವಾರ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.
ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿ 1200ಕ್ಕೂ ಹೆಚ್ಚು ಹ್ಯಾಂಡ್ಸ್ ಆಫ್ ರ್ಯಾಲಿಗಳು ನಡೆದಿದ್ದು, ನಾಗರಿಕ ಹಕ್ಕುಗಳ ಪ್ರತಿಪಾದಕರು, ಕಾರ್ಮಿಕ ಸಂಘಟನೆಗಳು, ಎಲ್ಬಿಬಿಟಿಕ್ಯೂ+ ಸಮೂಹಗಳು, ವೃದ್ಧರು ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಫೆಡರನ್ ಸರ್ಕಾರಕ್ಕೆ ಮರು ರೂಪ ನೀಡುವ ಟ್ರಂಪ್ ಆಡಳಿತದ ಕ್ರಮವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ರಾಜಧಾನಿ ವಾಷಿಂಗ್ಟನ್ ಡಿಸಿ, ರಾಜ್ಯ ರಾಜಧಾನಿಗಳು ಮತ್ತು ನ್ಯೂಯಾರ್ಕ್ನಿಂದ ಹಿಡಿದು ಲಾಸ್ಎಂಜಲೀಸ್ವರೆಗೆ ನಗರ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದಿವೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಟ್ರಂಪ್ ಆಡಳಿತ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಿರ್ನಾಮ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಅವರು ನಿದ್ರೆಯಲ್ಲಿರುವ ದೈತ್ಯನನ್ನು ಎಬ್ಬಿಸಿದ್ದಾರೆ. ಇನ್ನೂ ಏನನ್ನೂ ಅವರು ನೋಡಿಲ್ಲ" ಎಂದು ಪ್ರತಿಭಟನಾಕಾರ ಗ್ರೇಲಾನ್ ಹಗ್ಲರ್ ಹೇಳಿದ್ದಾರೆ.
ಫೆರಡಲ್ ಏಜೆನ್ಸಿಗಳನ್ನು ಮುಚ್ಚುವ ಪ್ರಸ್ತಾಪ ಮುಂದಿಟ್ಟಿರುವ ಸರ್ಕಾರಿ ಕ್ಷಮತೆ ಇಲಾಖೆಯ ಮುಖ್ಯಸ್ಥರಾದ ಎಲಾನ್ ಮಸ್ಕ್ ವಿರುದ್ಧವೂ ಪ್ರತಿಭಟನಾಕಾರರು ಕೆಂಗಣ್ಣು ಬೀರಿದ್ದಾರೆ. ತೆರಿಗೆ ಪಾವತಿದಾರರ ಕೋಟ್ಯಂತರ ಡಾಲರ್ ಗಳನ್ನು ಉಳಿಸುವ ಕ್ರಮ ಇದಾಗಿದೆ ಎಂದು ಮಸ್ಕ್ ಸಮರ್ಥಿಸಿಕೊಂಡಿದ್ದರೆ, ಅಗತ್ಯ ಸೇವೆಗಳನ್ನು ಶಿಥಿಲಗೊಳಿಸುವ ಕ್ರಮ ಎಂದು ಬಹಳಷ್ಟು ಮಂದಿ ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ.