ಗಾಝಾದಲ್ಲಿ ಇನ್ನೂ ಸಾವಿರಾರು ನಾಗರಿಕರು ಸಾಯುವ ಸಾಧ್ಯತೆ: ವಿಶ್ವಸಂಸ್ಥೆ ಎಚ್ಚರಿಕೆ
ಜಿನೆವಾ: ಗಾಝಾದಲ್ಲಿ ನೆಲದ ಕಾರ್ಯಾಚರಣೆಗೆ ಇಸ್ರೇಲ್ ದೃಢಸಂಕಲ್ಪ ಮಾಡಿರುವುದರಿಂದ ಇನ್ನೂ ಸಾವಿರಾರು ನಾಗರಿಕರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನರ್ ವೋಕರ್ ಟರ್ಕ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.
56 ವರ್ಷಗಳ ಹಿಂದಿನ ಆಕ್ರಮಣದ ಸಂದರ್ಭದಿಂದ ಇಲ್ಲಿಯವರೆಗೆ ನಡೆದಿರುವ ಮಿಲಿಟರಿ ಕಾರ್ಯಾಚರಣೆಯ ವಿಧಾನವನ್ನು ಗಮನಿಸಿದರೆ, ಗಾಝಾದಲ್ಲಿ ನಡೆಯುವ ದೊಡ್ಡ ಪ್ರಮಾಣದ ನೆಲದ ಕಾರ್ಯಾಚರಣೆಗಳ ಸಂಭವನೀಯ ದುರಂತ ಪರಿಣಾಮಗಳ ಬಗ್ಗೆ ಮತ್ತು ಇನ್ನೂ ಸಾವಿರಾರು ಮಂದಿ ಸಾವನ್ನಪ್ಪುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇನೆ’ ಎಂದವರು ಹೇಳಿದ್ದಾರೆ.
ಶುಕ್ರವಾರದಿಂದ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಂಟರ್ನೆಟ್ ಮತ್ತು ದೂರಸಂಪರ್ಕ ಸ್ಥಗಿತಗೊಂಡಿವುದನ್ನು ಟರ್ಕ್ ಖಂಡಿಸಿದ್ದಾರೆ. ‘ ದೂರಸಂಪರ್ಕ ವ್ಯವಸ್ಥೆಯ ಮೇಲೆ ಇಸ್ರೇಲ್ನ ದಾಳಿ ಮತ್ತು ಇದರಿಂದ ನೆಟ್ವರ್ಕ್ ಸ್ಥಗಿತವು ಗಾಝಾದ ನಾಗರಿಕರನ್ನು ಹೊರಜಗತ್ತಿನ ಸಂಪರ್ಕದಿಂದ ದೂರಗೊಳಿಸಿದೆ ಮತ್ತು ಗಾಝಾದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ಅವಕಾಶದಿಂದ ವಂಚಿತಗೊಳಿಸಿದೆ. ಜತೆಗೆ ನಾಗರಿಕರ ದುಃಖ ಮತ್ತು ಸಂಕಟಗಳನ್ನು ಸಂಕೀರ್ಣಗೊಳಿಸಿದೆ’ ಎಂದವರು ಖಂಡಿಸಿದ್ದಾರೆ. ವೈಮಾನಿಕ ದಾಳಿಯಿಂದ ನೆಲಸಮಗೊಂಡಿರುವ ಕಟ್ಟಡಗಳ ಅವಶೇಷಗಳಡಿ ಇನ್ನೂ ಸಾವಿರಾರು ಜನರು ಇರುವ ಶಂಕೆಯಿದ್ದು ಅವರನ್ನು ಸಂಪರ್ಕಿಸಲು ಆಂಬ್ಯುಲೆನ್ಸ್ ಗಳು, ನಾಗರಿಕ ರಕ್ಷಣಾ ತಂಡಗಳಿಗೆ ಸಾಧ್ಯವಾಗುವುದಿಲ್ಲ. ಈಗ ಉಲ್ಬಣಗೊಂಡಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಎಲ್ಲರೂ ಶಕ್ತಿಮೀರಿ ಕಾರ್ಯನಿರ್ವಹಿಸಬೇಕು ಎಂದು ಟರ್ಕ್ ಆಗ್ರಹಿಸಿದ್ದಾರೆ.