ಕೃತಕ ಬುದ್ಧಿಮತ್ತೆಯಿಂದ ಮಾನವಕುಲದ ಅಸ್ತಿತ್ವಕ್ಕೆ ಅಪಾಯ | ನೊಬೆಲ್ ಪುರಸ್ಕೃತ ವಿಜ್ಞಾನಿ ಜೆಫ್ರಿ ಹಿಂಟನ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ (Image by freepik)
ನ್ಯೂಯಾರ್ಕ್ : ಮುಂದಿನ ದಶಕದೊಳಗೆ ಕೃತಕ ಬುದ್ಧಿಮತ್ತೆಯು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮಾನವ ಕುಲವನ್ನೇ ನಾಶಪಡಿಸುವ ಅಪಾಯವಿದೆಯೆಂದು ಬ್ರಿಟಿಶ್-ಕೆನಡಿಯನ್ ಕಂಪ್ಯೂಟರ್ ವಿಜ್ಞಾನಿ ಹಾಗೂ ಈ ವರ್ಷದ ಭೌತಶಾಸ್ತ್ರ ನೊಬೆಲ್ ಪುರಸ್ಕೃತ ವಿಜ್ಞಾನಿ ಪ್ರೊ.ಜೆಫ್ರಿ ಹಿಂಟನ್ (77) ಎಚ್ಚರಿಕೆ ನೀಡಿದ್ದಾರೆ.
ಬಿಬಿಸಿ 4 ರೇಡಿಯೊ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದಿನ 10ರಿಂದ 20 ವರ್ಷದೊಳಗೆ ನಮಗಿಂತ ಹೆಚ್ಚು ಬುದ್ಧಿವಂತ ಸಾಧನಗಳ ಜೊತೆ ವ್ಯವಹರಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆಯೆಂದು ಹೇಳಿದ್ದಾರೆ.
ತಂತ್ರಜ್ಞಾನವು ಈಗ ನಿರೀಕ್ಷೆಯನ್ನು ಮೀರಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಇದರಿಂದಾಗಿ ಬೆಳೆದ ಕೃತಕ ಬುದ್ದಿಮತ್ತೆಯ ಎದುರು ಮಾನವರು ಮೂರು ವರ್ಷ ಪ್ರಾಯದ ಮಕ್ಕಳಿಗೆ ಸಮವಾಗಲಿದ್ದಾರೆ ಎಂದು ಎಐ ತಂತ್ರಜ್ಞಾನದ ‘ಗಾಡ್ಫಾದರ್’ ಎಂದೇ ಹೆಸರಾದ ಹಿಂಟನ್ ಹೇಳಿದ್ದಾರೆ.
ಅನಿರ್ಬಂಧಿತ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯಿಂದ ಎದುರಾಗಲಿರುವ ಅಪಾಯದ ಕುರಿತು ಮುಕ್ತವಾಗಿ ಮಾತನಾಡುವುದಕ್ಕಾಗಿ ಗೂಗಲ್ ಸಂಸ್ಥೆಯ ಉನ್ನತ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಹಿಂಟನ್ ವಿಶ್ವದಾದ್ಯಂತ ಗಮನಸೆಳೆದಿದ್ದರು. ದುಷ್ಟ ವ್ಯಕ್ತಿಗಳು, ಎಐ ತಂತ್ರಜ್ಞಾನವನ್ನು ಇತರರಿಗೆ ಅಪಾಯವುಂಟು ಮಾಡಲು ಬಳಸಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.