ಬೆದರಿಕೆ ಕರೆ: ಭದ್ರತೆ ಕೋರಿ ನಿಕ್ಕಿ ಹ್ಯಾಲೆ ಅರ್ಜಿ
ವಾಷಿಂಗ್ಟನ್ : ಚುನಾವಣಾ ಪ್ರಚಾರದ ಸಂದರ್ಭ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯ ರೇಸ್‍ನಲ್ಲಿರುವ ನಿಕ್ಕಿ ಹ್ಯಾಲೆ ಭದ್ರತೆ ಒದಗಿಸುವಂತೆ ಕೋರಿ ರಹಸ್ಯ ಸೇವಾ ಇಲಾಖೆಗೆ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಈ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳ ರೇಸ್‍ನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನಿಕ್ಕಿ ಹ್ಯಾಲೆ ನಡುವೆ ಸ್ಪರ್ಧೆಯಿದೆ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಆಗ್ರಹಿಸಿ ತನಗೆ ನಿರಂತರ ಬೆದರಿಕೆ ಎದುರಾಗಿರುವುದರಿಂದ ಭದ್ರತೆ ಹೆಚ್ಚಿಸುವಂತೆ ಹ್ಯಾಲೆ ಕೋರಿದ್ದಾರೆ. ಹಿಲ್ಟನ್‍ಹೆಡ್ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪದೇ ಪದೇ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ಭದ್ರತಾ ಸಿಬಂದಿ ಹೊರಗೆ ಕಳುಹಿಸಿದ್ದರು ಎಂದು `ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ. ` ಯಾವುದಕ್ಕೂ ಹಿಂಜರಿಯದೆ ಸ್ಪರ್ಧೆಯಲ್ಲಿ ಉಳಿದಿರುವಾಗ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಆದರೆ ಯಾವುದೇ ಕೃತ್ಯಗಳು ತನ್ನನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಸಲು ಸಾಧ್ಯವಿಲ್ಲ' ಎಂದು ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಈ ಮಧ್ಯೆ, ರಿಪಬ್ಲಿಕನ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಾಥಮಿಕ ಚುನಾವಣೆಯಲ್ಲಿ ಲೋವಾ ಮತ್ತು ನ್ಯೂ ಹ್ಯಾಂಪ್‍ಶೈರ್ ನಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಆದರೂ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಲು ಹ್ಯಾಲೆ ನಿರಾಕರಿಸಿದ್ದು ಈಗಲೂ ಟ್ರಂಪ್‍ರನ್ನು ಸೋಲಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.