“ಪನ್ನುನ್ ಹತ್ಯೆ ಸಂಚು ಪ್ರಕರಣ: ದ್ವಿಪಕ್ಷೀಯ ಸಂಬಂಧಕ್ಕೆ ಹಾನಿಯಾಗಬಹುದು”
ಭಾರತೀಯ ಅಮೆರಿಕನ್ ಸಂಸದರ ಎಚ್ಚರಿಕೆ
ಗುರುಪತ್ವಂತ್ ಸಿಂಗ್ ಪನ್ನುನ್ (Photo: NDTV)
ವಾಷಿಂಗ್ಟನ್: ಖಾಲಿಸ್ತಾನ್ ಪ್ರತ್ಯೇಕತಾವಾದಿ ಮತ್ತು ಭಾರತವು ಭಯೋತ್ಪಾದಕನೆಂದು ನಿಯೋಜಿಸಿರುವ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಸಂಚು ಪ್ರಕರಣದ ಹೊಣೆಗಾರರನ್ನು ಗುರುತಿಸದಿದ್ದರೆ ದ್ವಿಪಕ್ಷೀಯ ಸಂಬಂಧಕ್ಕೆ ಹಾನಿಯಾಗಬಹುದು ಎಂದು ಭಾರತೀಯ ಅಮೆರಿಕನ್ ಸಂಸದರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡನ ಹತ್ಯೆಯ ಪ್ರಯತ್ನಕ್ಕೆ ಭಾರತ ಸರಕಾರದ ಅಧಿಕಾರಿಗಳು ಸೇರಿದಂತೆ ಜನರನ್ನು ಸಂಪೂರ್ಣವಾಗಿ ತನಿಖೆ ಮಾಡಿ ಹೊಣೆಗಾರರನ್ನಾಗಿ ಮಾಡದಿದ್ದರೆ ಭಾರತ- ಅಮೆರಿಕ ಸಂಬಂಧಕ್ಕೆ ಗಮನಾರ್ಹ ಹಾನಿಯಾಗಬಹುದು ಎಂದು ಅಮೆರಿಕ ಸಂಸತ್ನ ಭಾರತೀಯ ಅಮೆರಿಕನ್ ಸಂಸದರಾದ ಅಮಿ ಬೆರಾ, ಪ್ರಮೀಳಾ ಜಯಪಾಲ್, ರೊ ಖನ್ನ, ರಾಜಾ ಕೃಷ್ಣಮೂರ್ತಿ ಮತ್ತು ಶ್ರೀ ಥಾಣೆದಾರ್ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಆಪಾದಿತ ವಿಫಲ ಹತ್ಯೆಯ ಸಂಚಿನ ಬಗ್ಗೆ ತನಿಖೆಗೆ ತನಿಖಾ ಸಮಿತಿ ನೇಮಿಸುವ ಭಾರತ ಸರಕಾರದ ಘೋಷಣೆಯನ್ನು ಸ್ವಾಗತಿಸುವುದಾಗಿ ಈ ಸಂಸದರು ಹೇಳಿದ್ದು, ಇದು(ಅಮೆರಿಕ ಭೂಪ್ರದೇಶದಲ್ಲಿ ಅಮೆರಿಕದ ಪ್ರಜೆಯನ್ನು ಹತ್ಯೆ ಮಾಡುವ ಸಂಚು ರೂಪಿಸುವುದು) ಮತ್ತೆ ಸಂಭವಿಸುವುದಿಲ್ಲ ಎಂದು ಭಾರತ ಸರಕಾರ ಅಮೆರಿಕಕ್ಕೆ ಭರವಸೆ ನೀಡಬೇಕು ಎಂದಿದ್ದಾರೆ.
`ನಿಖಿಲ್ ಗುಪ್ತಾ ಅವರ ಮೇಲಿನ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯ ಕುರಿತು ಆಡಳಿತವು ನಮಗೆ ವರ್ಗೀಕೃತ ಮಾಹಿತಿ ಒದಗಿಸಿರುವುದನ್ನು ನಾವು ಪ್ರಶಂಸಿಸುತ್ತೇವೆ. ಇದರಲ್ಲಿ ಭಾರತ ಸರಕಾರದ ಅಧಿಕಾರಿಯೊಬ್ಬರು ಅಮೆರಿಕನ್ ಪ್ರಜೆಯ ಹತ್ಯೆ ಸಂಚಿನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತ ಮತ್ತು ಅಮೆರಿಕ ಸಂಸತ್ನ ನಡುವಿನ ಪಾಲುದಾರಿಕೆಯು ಎರಡೂ ರಾಷ್ಟ್ರಗಳ ಜನರ ಜೀವನದ ಮೇಲೆ ಅರ್ಥಪೂರ್ಣ ಪ್ರಭಾವವನ್ನು ಉಂಟು ಮಾಡಿದೆ. ಆದರೆ ಜನತೆಯ ಸುರಕ್ಷತೆ ಮತ್ತು ಯೋಗಕ್ಷೇಮವು ಅತ್ಯಂತ ಆದ್ಯತೆಯ ವಿಷಯವಾಗಿದೆ ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ, ಪನ್ನೂನ್ ಹತ್ಯೆಗೆ ಬಾಡಿಗೆ ಹಂತಕರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರ ಹೊಸ ಮತ್ತು ವಿವರವಾದ ದೋಷಾರೋಪಣೆ ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ಗಳು ಬಿಡುಗಡೆಗೊಳಿಸಿದ್ದಾರೆ. ಹೆಸರಿಸಲಾಗದ, ಆದರೆ ಗುರುತಿಸಲಾಗಿರುವ ಭಾರತದ ಅಧಿಕಾರಿ(ಸಿಸಿ-1)ಯು ನಿಖಿಲ್ ಗುಪ್ತಾನನ್ನು ನೇಮಕ ಮಾಡಿರುವುದಾಗಿ ದೋಷಾರೋಪಣೆಯಲ್ಲಿ ಉಲ್ಲೇಖಿಸಲಾಗಿದೆ. ನಿಖಿಲ್ ಗುಪ್ತಾ ಈಗ ಝೆಕ್ ಗಣರಾಜ್ಯದಲ್ಲಿ ಅಧಿಕಾರಿಗಳ ವಶದಲ್ಲಿದ್ದು ಅಮೆರಿಕಕ್ಕೆ ಗಡೀಪಾರು ಆಗುವ ಪ್ರಕ್ರಿಯೆ ಎದುರಿಸುತ್ತಿದ್ದಾರೆ.
ಅಮೆರಿಕದ ಕೋರಿಕೆಯ ಮೇರೆಗೆ ಗುಪ್ತಾ ಬಂಧನ
ಪನ್ನೂನ್ ಹತ್ಯೆಗೆ ಸಂಚು ಹೂಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾರನ್ನು ಅಮೆರಿಕದ ಕೋರಿಕೆಯ ಮೇರೆಗೆ ಬಂಧಿಸಲಾಗಿದೆ ಎಂದು ಝೆಕ್ ಗಣರಾಜ್ಯದ ನ್ಯಾಯ ಇಲಾಖೆ ಸ್ಪಷ್ಟಪಡಿಸಿದೆ.
ಪನ್ನೂನ್ ಹತ್ಯೆ ಮಾಡುವ ವಿಫಲ ಸಂಚಿನಲ್ಲಿ ಭಾರತ ಸರಕಾರದ ಉದ್ಯೋಗಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ನವೆಂಬರ್ 29ರಂದು ನಿಖಿಲ್ ಗುಪ್ತಾ ವಿರುದ್ಧ ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ಗಳು ಆರೋಪಿಸಿದ್ದಾರೆ. 52 ವರ್ಷದ ನಿಖಿಲ್ ಗುಪ್ತಾ ಸುಪಾರಿ ಕೊಲೆಯ ಆರೋಪ ಎದುರಿಸುತ್ತಿದ್ದು ಇದಕ್ಕೆ ಗರಿಷ್ಟ 10 ವರ್ಷ ಜೈಲುಶಿಕ್ಷೆ, ಸುಪಾರಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿಯೂ ಗರಿಷ್ಟ 10 ವರ್ಷ ಜೈಲುಶಿಕ್ಷೆಗೆ ಅವಕಾಶವಿದೆ. ನ್ಯೂಯಾರ್ಕ್ ಸಿಟಿ ನಿವಾಸಿ ಪನ್ನೂನ್ ಹತ್ಯೆಗೆ ಬಾಡಿಗೆ ಹಂತಕನಿಗೆ 1 ಲಕ್ಷ ಡಾಲರ್ ಹಣ ನೀಡಲು ನಿಖಿಲ್ ಗುಪ್ತಾ ಸಮ್ಮತಿಸಿದ್ದರು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಮತ್ತು ಝೆಕ್ ಗಣರಾಜ್ಯಗಳ ನಡುವಿನ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದಡಿ ಜೂನ್ 30ರಂದು ಗುಪ್ತಾನನ್ನು ಬಂಧಿಸಲಾಗಿದೆ ಎಂದು ಝೆಕ್ ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ನಿಖಿಲ್ ಗುಪ್ತಾನನ್ನು ಝೆಕ್ ಅಧಿಕಾರಿಗಳು ಅಕ್ರಮವಾಗಿ ಬಂಧಿಸಿ ಅಮೆರಿಕಕ್ಕೆ ಹಸ್ತಾಂತರಿಸಲು ಮುಂದಾಗಿದ್ದು ಝೆಕ್ ಗಣರಾಜ್ಯದಲ್ಲಿರುವ ಭಾರತದ ಕಾನ್ಸುಲರ್ ಕಚೇರಿ ತಕ್ಷಣ ಗುಪ್ತಾರಿಗೆ ನೆರವು ಒದಗಿಸಬೇಕು ಎಂದು ಕೋರಿ ಗುಪ್ತಾರ ಸಂಬಂಧಿಯೊಬ್ಬರು ಭಾರತದ ಸುಪ್ರೀಂಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.