ರುವಾಂಡಾ ಯೋಜನೆ |ಮರುಪರಿಶೀಲನೆಗೆ ವಿಶ್ವಸಂಸ್ಥೆ ಆಗ್ರಹ
Photo : PTI
ಜಿನೆವಾ: ಆಶ್ರಯ ಕೋರುವವರನ್ನು ರುವಾಂಡಾಕ್ಕೆ ಗಡೀಪಾರು ಮಾಡುವ ಯೋಜನೆಯನ್ನು ಮರು ಪರಿಶೀಲಿಸುವಂತೆ ವಿಶ್ವಸಂಸ್ಥೆ ಮಂಗಳವಾರ ಬ್ರಿಟನ್ ಸರಕಾರವನ್ನು ಆಗ್ರಹಿಸಿದೆ.
ಈ ಯೋಜನೆ ಕಾನೂನು ಸುವ್ಯವಸ್ಥೆಗೆ ಬೆದರಿಕೆಯಾಗಲಿದೆ ಮತ್ತು ಜಾಗತಿಕವಾಗಿ ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿಯಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಮಸೂದೆಯನ್ನು ಹಿಂಪಡೆಯಬೇಕು. ಅದರ ಬದಲು, ಅಂತರಾಷ್ಟ್ರೀಯ ಸಹಕಾರ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿಗೆ ಗೌರವದ ಆಧಾರದ ಮೇಲೆ ನಿರಾಶ್ರಿತರು ಮತ್ತು ವಲಸಿಗರ ಅನಿಯಂತ್ರಿಕ ಹರಿವನ್ನು ಪರಿಹರಿಸಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹಾಗೂ ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿಯ ಮುಖ್ಯಸ್ಥ ಫಿಲಿಪ್ಪೋ ಗ್ರಾಂಡೆ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಮಸೂದೆ ಜಾರಿಗೊಂಡರೆ `ಆಶ್ರಯ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸುವ ಬ್ರಿಟನ್ ನ್ಯಾಯಾಲಯಗಳ ಕಾರ್ಯವನ್ನು ನಿರ್ಬಂಧಿಸುತ್ತದೆ, ಅಪಾಯ ಎದುರಿಸುತ್ತಿರುವ ಅರ್ಜಿದಾರರು ಮೇಲ್ಮನವಿ ಸಲ್ಲಿಸಲೂ ಸೀಮಿತ ಅವಕಾಶವಿರುತ್ತದೆ. ಇದು ನಿರಾಶ್ರಿತರ ಕುರಿತಾದ ವಿಶ್ವಸಂಸ್ಥೆ ನಿರ್ಣಯವನ್ನು ಉಲ್ಲಂಘಿಸುತ್ತದೆ ' ಎಂದು ವಿಶ್ವಸಂಸ್ಥೆ ಅಸಮಾಧಾನ ಸೂಚಿಸಿದೆ.