ರಾಜತಾಂತ್ರಿಕರನ್ನು ʼಟ್ರ್ಯಾಕ್' ಮಾಡುವುದು ಭಯೋತ್ಪಾದನಾ ದಾಳಿಯ ಯೋಜನೆಗೆ ಸಮ: ರಶ್ಯ
PC : ANI
ಮಾಸ್ಕೋ: ರಾಜತಾಂತ್ರಿಕರನ್ನು `ಟ್ರ್ಯಾಕ್' ಮಾಡುವಂತೆ ಖಾಲಿಸ್ತಾನ್ ಬೆಂಬಲಿಗರಿಗೆ ಖಾಲಿಸ್ತಾನ್ ಪರ ಸಂಘಟನೆ `ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಕರೆ ನೀಡಿರುವುದು ಭಯೋತ್ಪಾದನಾ ದಾಳಿಗೆ ಯೋಜನೆ ರೂಪಿಸುವುದಕ್ಕೆ ಸಮ ಎಂದು ರಶ್ಯ ಪ್ರತಿಕ್ರಿಯಿಸಿದೆ.
ಕೆನಡಾದಲ್ಲಿರುವ ರಶ್ಯದ ರಾಯಭಾರ ಕಚೇರಿಯು ಭಾರತೀಯ ಅಧಿಕಾರಿಗಳೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಸುಗಮಗೊಳಿಸಿದೆ ಎಂದು ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಆರೋಪಿಸಿತ್ತು. ಕೆನಡಾದಲ್ಲಿ ರಶ್ಯದ ರಾಯಭಾರಿ ವ್ಲಾದಿಮಿರ್ ಸೆವಾಸ್ಟ್ಯನೊವಿಚ್ ಹಾಗೂ ಅಮೆರಿಕದಲ್ಲಿ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾರ `ಸಾರ್ವಜನಿಕ ಕಾರ್ಯಕ್ರಮದ ' ಬಗ್ಗೆ ಮಾಹಿತಿ ನೀಡುವವರಿಗೆ 25,000 ಡಾಲರ್ ಬಹುಮಾನ ನೀಡುವುದಾಗಿ ಎಸ್ಎಫ್ಜೆ ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಘೋಷಿಸಿದ್ದ.
ಪನ್ನೂನ್ ಆರೋಪವನ್ನು ರಶ್ಯ ನಿರಾಕರಿಸಿದ್ದು ನಮ್ಮ ರಾಜತಾಂತ್ರಿಕ ನಿಯೋಗಕ್ಕೆ ಭದ್ರತೆ ಹೆಚ್ಚಿಸುವಂತೆ ಆಗ್ರಹಿಸಿದೆ. ರಶ್ಯದ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗಿದೆ. ಪನ್ನೂನ್ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ ನಾವು ಯಾವತ್ತೂ ಪ್ರತಿಪಾದಿಸುತ್ತಿದ್ದು ರಾಜತಾಂತ್ರಿಕರ ಜಾಡು ಪತ್ತೆಹಚ್ಚುವಂತೆ ಆತ ನೀಡಿರುವ ಹೇಳಿಕೆಯನ್ನು ಜಾಗತಿಕ ಸಮುದಾಯ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಶ್ಯ ಆಗ್ರಹಿಸಿದೆ.