ವಿದ್ಯುತ್ ದರ ಹೆಚ್ಚಳ, ನೂತನ ತೆರಿಗೆ ಹೇರಿಕೆ ವಿರುದ್ಧ ಪಾಕ್ ನಲ್ಲಿ ವರ್ತಕರ ಮುಷ್ಕರ
PC : PTI
ಇಸ್ಲಾಮಾಬಾದ್ : ವಿದ್ಯುತ್ ದರದಲ್ಲಿ ತೀವ್ರ ಏರಿಕೆ ಹಾಗೂ ಅಂಗಡಿ ಮಾಲಕರ ಮೇಲೆ ನೂತನ ತೆರಿಗೆಗಳ ಹೇರಿಕೆಯನ್ನು ಪ್ರತಿಭಟಿಸಿ ಪಾಕಿಸ್ತಾನಾದ್ಯಂತ ವರ್ತಕರು ಬುಧವಾರ ಅಂಗಡಿ, ಮುಂಗಟ್ಟೆಗಳನ್ನು ಮುಚ್ಚಿ ಬಂದ್ ಆಚರಿಸಿದ್ದಾರೆ.
7 ಶತಕೋಟಿ ಡಾಲರ್ ಸಾಲಕ್ಕಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಜೊತೆ ಒಪ್ಪಂದವನ್ನು ಏರ್ಪಡಿಸಿಕೊಂಡ ಬಳಿಕ ಪಾಕಿಸ್ತಾನವು ಸ್ಥಿರವಾಗಿ ವಿದ್ಯುತ್ ದರಗಳನ್ನು ಹೆಚ್ಚಿಸುತ್ತಲೇ ಬಂದಿದೆ. ಜೀವನವೆಚ್ಚದಲ್ಲಿ ತೀವ್ರ ಅರಿಕೆ, ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆಯು ಪಾಕ್ನಾದ್ಯಂತ ಜನರಲ್ಲಿ ವ್ಯಾಪಕ ಅಸಮಾಧಾನವನ್ನು ಭುಗಿಲೆಬ್ಬಿಸಿದ್ದು, ಪ್ರತಿಭಟನೆಗಳಿಗೆ ಕಾರಣವಾಗಿವೆ.
ವರ್ತಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬುಧವಾರ ಪಾಕಿಸ್ತಾನಾದ್ಯಂತ ಸಾರ್ವಜನಿಕ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದವು. ಆದಾಗ್ಯೂ ಔಷಧಿ ಅಂಗಡಿಗಳು ಹಾಗೂ ಮೂಲಭೂತ ಆಹಾರ ವಸ್ತುಗಳನ್ನು ಮಾರಾಟ ಮಾಡುವ ದಿನಸಿ ಅಂಗಡಿಗಳು ತೆರೆದಿದ್ದವು. ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಅಗತ್ಯವಸ್ತುಗಳ ಅಂಗಡಿಗಳನ್ನು ತೆರೆದಿಡಲಾಗಿತ್ತು ಎಂದು ಮುಷ್ಕರ ಸಂಘಟಕರಲ್ಲೊಬ್ಬರಾದ ನಾಯಕ ಕಾಶಿಫ್ ಚೌಧುರಿ ಹೇಳಿದ್ದಾರೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್ ಹಾಗೂ ಕರಾಚಿಗಳಲ್ಲಿಯೂ ಬಹುತೇಕ ಅಂಗಡಿ ಮುಂಗಟ್ಚೆಗಳು ಮುಚ್ಚಿದ್ದವು.
ಪಾಕಿಸ್ತಾನ ಜಮಾತೆ ಇಸ್ಲಾಮಿ ಪಾಕಿಸ್ತಾನ್ ಪಕ್ಷದ ವರಿಷ್ಠರಾದ ನಮೀಮುರ್ರಹ್ಮಾನ್ ಮುಷ್ಕರಕ್ಕೆ ಕರೆ ನೀಡಿದ್ದರು ಹಾಗೂ ವಿವಿಧ ಕಾರ್ಮಿಕ ಒಕ್ಕೂಟಗಳು ಹಾಗೂ ಸಂಘಟನೆಗಳು ಬೆಂಬಲಿಸಿದ್ದವು. ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಹಾಗೂ ಆಗ್ನೇಯ ಬಲೂಚಿಸ್ತಾನ ಪ್ರಾಂತದಲ್ಲಿ ಭಾಗಶಃ ಹರತಾಳ ಆಚರಿಸಲಾಯಿತು.