ಕೆನಡಾದ ಆರ್ಥಿಕತೆ ಕುಸಿದರೆ ಸ್ವಾಧೀನ ಸುಲಭ ಎಂದು ಟ್ರಂಪ್ ಭಾವನೆ: ಟ್ರೂಡೊ ಆರೋಪ

ಜಸ್ಟಿನ್ ಟ್ರೂಡೊ | PC : PTI
ಒಟ್ಟಾವ: ಸ್ವಾಧೀನತೆ ಸುಲಭವಾಗಬೇಕಿದ್ದರೆ ಕೆನಡಾದ ಆರ್ಥಿಕತೆ ಕುಸಿಯಬೇಕು ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಲೆಕ್ಕಾಚಾರವಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ್ದಾರೆ.
ರಶ್ಯ ಅಧ್ಯಕ್ಷ ಪುಟಿನ್ರನ್ನು ಮೆಚ್ಚಿಸುವ ಗುರಿಯನ್ನು ಹೊಂದಿರುವ ಅಮೆರಿಕದ ಸುಂಕಗಳು ತೀರಾ ಅಪ್ರಬುದ್ಧವಾಗಿವೆ. ಇದಕ್ಕೆ ಪ್ರತಿಯಾಗಿ ಕೆನಡಾವು ಅಮೆರಿಕದ ಸರಕುಗಳ ಮೇಲೆ ಪ್ರತೀಕಾರ ಸುಂಕ ವಿಧಿಸುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈಗ ಅಮೆರಿಕವು ತನ್ನ ನಿಕಟ ಸಹಭಾಗಿ ಮತ್ತು ಮಿತ್ರ ಕೆನಡಾದ ವಿರುದ್ಧ ವ್ಯಾಪಾರ ಯುದ್ಧವನ್ನು ಆರಂಭಿಸಿದೆ. ಇದೇ ವೇಳೆ ಅವರು ರಶ್ಯದ ಜತೆ ಸಕಾರಾತ್ಮಕವಾಗಿ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಾರೆ. ಇದು ಸುಳ್ಳು ಹೇಳುವ, ಕೊಲೆಗಡುಕ ಸರ್ವಾಧಿಕಾರಿ ವ್ಲಾದಿಮಿರ್ ಪುಟಿನ್ರನ್ನು ಓಲೈಸುವ ಕ್ರಮವಾಗಿದೆ ಎಂದು ಟ್ರೂಡೊ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ಮೂರು ಅತೀ ದೊಡ್ಡ ವ್ಯಾಪಾರ ಪಾಲುದಾರರಾದ ಕೆನಡಾ, ಮೆಕ್ಸಿಕೋ ಮತ್ತು ಚೀನಾದ ಆಮದುಗಳ ಮೇಲೆ ಹೆಚ್ಚುವರಿ ಸುಂಕವನ್ನು ಟ್ರಂಪ್ ವಿಧಿಸಿದ್ದಾರೆ.
` ನಾನು ಒಬ್ಬ ನಿರ್ದಿಷ್ಟ ಅಮೆರಿಕನ್, ಡೊನಾಲ್ಡ್ ಜೊತೆ ನೇರವಾಗಿ ಮಾತನಾಡಲು ಬಯಸುತ್ತೇನೆ. ಆರ್ಥಿಕ ಒತ್ತಡದ ಮೂಲಕ ಕೆನಡಾವನ್ನು 51ನೇ ರಾಜ್ಯವಾಗಿಸುವ ಕನಸು ಕಾಣಬೇಡಿ. ಅದೆಂದಿಗೂ ಸಾಧ್ಯವಾಗದು. ವಾಲ್ ಸ್ಟ್ರೀಟ್ ಜರ್ನಲ್(ಅಮೆರಿಕದ ದಿನಪತ್ರಿಕೆ)ಯನ್ನು ಒಪ್ಪಿಕೊಳ್ಳುವುದು ನನ್ನ ಅಭ್ಯಾಸದಲ್ಲಿಲ್ಲ. ಆದರೆ ನೀವು (ಡೊನಾಲ್ಡ್ ಟ್ರಂಪ್) ತುಂಬಾ ಬುದ್ಧಿವಂತ ಎಂದು ಅವರು(ಪತ್ರಿಕೆ) ಬೆಟ್ಟುಮಾಡಿದರೂ ಇದು(ಕೆನಡಾದ ಸ್ವಾಧೀನತೆ) ಅಪ್ರಬುದ್ಧ ಕಲ್ಪನೆಯಾಗಿದೆ' ಎಂದು ಟ್ರೂಡೊ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ, ಟ್ರೂಡೊ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಇದಿರೇಟು ನೀಡಿರುವ ಟ್ರಂಪ್ ` ಅವರು ಅಮೆರಿಕದ ಮೇಲೆ ಪ್ರತೀಕಾರ ಸುಂಕ ವಿಧಿಸಿದರೆ ಪರಸ್ಪರ ಸುಂಕದಲ್ಲಿ ಅಷ್ಟೇ ಪ್ರಮಾಣದಷ್ಟು ಏರಿಕೆಯಾಗುತ್ತದೆ ಎಂಬುದನ್ನು ದಯವಿಟ್ಟು ಕೆನಡಾದ ಗವರ್ನರ್ ಟ್ರೂಡೊಗೆ ಯಾರಾದರೂ ವಿವರಿಸಿ ಹೇಳಿ' ಎಂದು ಪೋಸ್ಟ್ ಮಾಡಿದ್ದಾರೆ.