ಅಮೆರಿಕ, ಇಸ್ರೇಲ್ ಪ್ರಜೆಗಳ ವಿರುದ್ಧ ತನಿಖೆ | ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮೇಲೆ ನಿರ್ಬಂಧ ಹೇರಿದ ಟ್ರಂಪ್

ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ | PTI
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ತನ್ನ ದೇಶದ ಪ್ರಜೆಗಳು ಅಥವಾ ಇಸ್ರೇಲ್ನಂತಹ ಮಿತ್ರರಾಷ್ಟ್ರಗಳ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ದ ತನಿಖೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಆರ್ಥಿಕ ಮತ್ತು ಪ್ರಯಾಣ ನಿರ್ಬಂಧಗಳನ್ನು ಹೇರಿದ್ದಾರೆ. ತನ್ಮೂಲಕ ತನ್ನ ಮೊದಲ ಅವಧಿಯಲ್ಲಿ ಕೈಗೊಂಡಿದ್ದ ಕ್ರಮವನ್ನು ಪುನರಾವರ್ತಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಟ್ರಂಪ್ ಈ ಕ್ರಮವನ್ನು ತೆಗೆದುಕೊಂಡಿದ್ದಾರೆ. ಗಾಝಾ ಪಟ್ಟಿಯಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ನೆತಾನ್ಯಹು ಅವರು ತನ್ನ ಮಾಜಿ ರಕ್ಷಣಾ ಸಚಿವ ಮತ್ತು ಫೆಲೆಸ್ತೀನ್ ಹೋರಾಟಗಾರರ ಗುಂಪು ಹಮಾಸ್ ನಾಯಕರೊಂದಿಗೆ ಐಸಿಸಿಗೆ ಬೇಕಾಗಿರುವ ವ್ಯಕ್ತಿಯಾಗಿದ್ದಾರೆ.
ನಿರ್ಬಂಧಕ್ಕೊಳಗಾಗಿರುವ ವ್ಯಕ್ತಿಗಳ ಹೆಸರುಗಳನ್ನು ಅಮೆರಿಕ ಎಷ್ಟು ಬೇಗನೆ ಪ್ರಕಟಿಸಲಿದೆ ಎನ್ನುವುದು ಸ್ಪಷ್ಟವಾಗಿಲ್ಲ. 2020ರಲ್ಲಿ ಟ್ರಂಪ್ ಮೊದಲ ಅಧಿಕಾರಾವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನಿಕರಿಂದ ಯುದ್ಧಾಪರಾಧಗಳ ಆರೋಪಗಳ ಕುರಿತು ಐಸಿಸಿ ತನಿಖೆಗೆ ಸಂಬಂಧಿಸಿದಂತೆ ಆಗಿನ ಪ್ರಾಸಿಕ್ಯೂಟರ್ ಫಟೌ ಬೆನ್ಸೌಡಾ ಮತ್ತು ಅವರ ಹಿರಿಯ ಸಹಾಯಕರೋರ್ವರ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು.
ಟ್ರಂಪ್ ಕ್ರಮಕ್ಕೆ ಐಸಿಸಿ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಹೆಸರಿಸಲಾದ ವ್ಯಕ್ತಿಗಳು ಅಮೆರಿಕದಲ್ಲಿ ಹೊಂದಿರುವ ಯಾವುದೇ ಆಸ್ತಿಗಳ ಸ್ತಂಭನ ಮತ್ತು ಅವರು ಹಾಗೂ ಅವರ ಕುಟುಂಬಗಳು ಅಮೆರಿಕಕ್ಕೆ ಭೇಟಿ ನೀಡುವುದಕ್ಕೆ ನಿಷೇಧ ಇವು ನಿರ್ಬಂಧಗಳಲ್ಲಿ ಸೇರಿವೆ.
125 ಸದಸ್ಯರ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದಂತೆ ಯುದ್ಧಾಪರಾಧಗಳು, ಮಾನವತೆಯ ವಿರುದ್ಧದ ಅಪರಾಧಗಳು, ನರಮೇಧ ಮತ್ತು ಆಕ್ರಮಣಕ್ಕಾಗಿ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸುವ ಕಾಯಂ ನ್ಯಾಯಾಲಯವಾಗಿದ್ದು, ಅಮೆರಿಕ,ಚೀನಾ,ರಷ್ಯಾ ಮತ್ತು ಇಸ್ರೇಲ್ ಅದರ ಸದಸ್ಯರಾಷ್ಟ್ರಗಳಲ್ಲ.
ಅಮೆರಿಕದ ಸಂಭಾವ್ಯ ನಿರ್ಬಂಧಗಳಿಂದ ತನ್ನ ಸಿಬ್ಬಂದಿಗಳನ್ನು ರಕ್ಷಿಸಲು ಈಗಾಗಲೇ ಕ್ರಮಗಳನ್ನು ಕೈಗೊಂಡಿರುವ ಐಸಿಸಿ ಅವರಿಗೆ ಮೂರು ತಿಂಗಳ ವೇತನಗಳನ್ನು ಮುಂಚಿತವಾಗಿ ಪಾವತಿಸಿದೆ.
ನಿರ್ಬಂಧಗಳು ಎಲ್ಲ ಪರಿಸ್ಥಿತಿಗಳಲ್ಲಿ ಮತ್ತು ಪ್ರಕರಣಗಳಲ್ಲಿ ನ್ಯಾಯಾಲಯದ ಕಾರ್ಯ ನಿರ್ವಹಣೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಅದರ ಅಸ್ತಿತ್ವವನ್ನೇ ಅಪಾಯಕ್ಕೆ ಸಿಲುಕಿಸುತ್ತವೆ ಎಂದು ಐಸಿಸಿ ಅಧ್ಯಕ್ಷ ಟೊಮೊಕೊ ಅಕನೆ ಅವರು ಕಳೆದ ಡಿಸೆಂಬರ್ನಲ್ಲಿ ಎಚ್ಚರಿಕೆ ನೀಡಿದ್ದರು.
ರಷ್ಯಾ ಕೂಡ ಐಸಿಸಿಯನ್ನು ಗುರಿಯಾಗಿಸಿಕೊಂಡಿದೆ. 2023ರಲ್ಲಿ ಐಸಿಸಿಯು ಉಕ್ರೇನ್ನಿಂದ ನೂರಾರು ಮಕ್ಕಳನ್ನು ಅಕ್ರಮವಾಗಿ ಗಡಿಪಾರು ಮಾಡಿದ್ದಕ್ಕಾಗಿ ಯುದ್ಧಾಪರಾಧಗಳ ಆರೋಪದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ವಿರುದ್ಧ ಬಂಧನ ವಾರಂಟ್ನ್ನು ಹೊರಡಿಸಿತ್ತು. ಐಸಿಸಿಯ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ಗೆ ಪ್ರವೇಶವನ್ನು ನಿಷೇಧಿಸಿರುವ ರಷ್ಯಾ,ಅವರನ್ನು ಮತ್ತು ಇಬ್ಬರು ಐಸಿಸಿ ನ್ಯಾಯಾಧೀಶರನ್ನು ತನ್ನ ‘ವಾಂಟೆಡ್’ ಪಟ್ಟಿಯಲ್ಲಿರಿಸಿದೆ.