ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರ್ಖಾನೆ ಸ್ಥಾಪಿಸಿದರೆ ಅಮೆರಿಕಕ್ಕೆ ಅನ್ಯಾಯವಾಗಲಿದೆ: ಟ್ರಂಪ್

ಡೊನಾಲ್ಡ್ ಟ್ರಂಪ್ , ಎಲಾನ್ ಮಸ್ಕ್ | PTI
ವಾಶಿಂಗ್ಟನ್: ಒಂದು ವೇಳೆ ಭಾರತದ ತೆರಿಗೆಯನ್ನು ತಪ್ಪಿಸಲು ಟೆಸ್ಲಾ ಕಂಪನಿಯೇನಾದರೂ ಭಾರತದಲ್ಲಿ ತನ್ನ ಕಾರ್ಖಾನೆ ಸ್ಥಾಪಿಸಿದರೆ, ಅದರಿಂದ ಅಮೆರಿಕಕ್ಕೆ ಅನ್ಯಾಯವಾಗಲಿದೆ ಎಂದು ಮಂಗಳವಾರ ʼಫಾಕ್ಸ್ ನ್ಯೂಸ್ʼ ಸುದ್ದಿ ಸಂಸ್ಥೆಯಲ್ಲಿ ಪ್ರಸಾರವಾಗಿರುವ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕಾರುಗಳ ಮೇಲೆ ಭಾರತ ವಿಧಿಸುತ್ತಿರುವ ಅತ್ಯಧಿಕ ಸುಂಕದ ಬಗ್ಗೆ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಿದ್ದೂ, ವ್ಯಾಪಾರ ಒಪ್ಪಂದದ ದಿಕ್ಕಿನಲ್ಲಿ ತ್ವರಿತವಾಗಿ ಕೆಲಸ ಮಾಡಲು ಹಾಗೂ ತೆರಿಗೆಯ ಕುರಿತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಅವರು ಸಮ್ಮತಿಸಿದ್ದರು.
ವಿದ್ಯುತ್ ಚಾಲಿತ ವಾಹನಗಳಿಗೆ ಪರಿವರ್ತನೆಗೊಳ್ಳುವುದು ಇನ್ನೂ ಶೈಶವಾವಸ್ಥೆಯಲ್ಲಿರುವಾಗ, ವಿಶ್ವದ ಮೂರನೆ ಅತಿ ದೊಡ್ಡ ಆಟೊಮೊಬೈಲ್ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅನ್ನು ರಕ್ಷಿಸಲು ಭಾರತವು ವಿದ್ಯುತ್ ಚಾಲಿತ ವಾಹನಗಳ ಮೇಲೆ ಶೇ. 100ರವರೆಗೆ ಆಮದು ಸುಂಕ ವಿಧಿಸುತ್ತಿದೆ ಎಂದು ಟೆಸ್ಲಾದ ಮುಖ್ಯಸ್ಥ ಎಲಾನ್ ಮಸ್ಕ್ ದೀರ್ಘಕಾಲದಿಂದ ಟೀಕಿಸುತ್ತಾ ಬರುತ್ತಿದ್ದಾರೆ.
ದಕ್ಷಿಣ ಏಶ್ಯದ ರಾಷ್ಟ್ರವಾದ ಭಾರತದಲ್ಲಿ ಕಾರು ಮಾರಾಟ ಮಾಡುವುದು ಮಸ್ಕ್ ಗೆ ಅಸಾಧ್ಯ ಎಂದೂ ಹೇಳಿರುವ ಡೊನಾಲ್ಡ್ ಟ್ರಂಪ್, “ವಿಶ್ವದಲ್ಲಿನ ಎಲ್ಲ ದೇಶಗಳೂ ನಮ್ಮಿಂದ ಲಾಭ ಪಡೆಯುತ್ತವೆ ಹಾಗೂ ಅವು ಅದನ್ನು ತೆರಿಗೆಯ ರೂಪದಲ್ಲಿ ಮಾಡುತ್ತವೆ. ಪ್ರಾಯೋಗಿಕವಾಗಿ ಕಾರು ಮಾರಾಟ ಮಾಡುವುದು ಅಸಾಧ್ಯ. ಉದಾಹರಣೆಗೆ, ಭಾರತ” ಎಂದೂ ಹೇಳಿದ್ದಾರೆ.
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ನೂತನ ವಿದ್ಯುತ್ ಚಾಲಿತ ವಾಹನ ನೀತಿಯನ್ನು ಅನಾವರಣಗೊಳಿಸಿದ್ದ ಭಾರತ ಸರಕಾರ, ಒಂದು ವೇಳೆ ಕಾರು ತಯಾರಕರು ಭಾರತದಲ್ಲಿ ಕನಿಷ್ಠ ಪಕ್ಷ 500 ದಶ ಲಕ್ಷ ಡಾಲರ್ ಹೂಡಿಕೆ ಮಾಡಿ, ಇಲ್ಲಿಯೇ ತಮ್ಮ ಕಾರ್ಖಾನೆ ಸ್ಥಾಪಿಸಿದರೆ, ಅಂಥವರಿಗೆ ಆಮದು ಸುಂಕವನ್ನು ಶೇ. 15ರವರೆಗೆ ತಗ್ಗಿಸುವ ಭರವಸೆ ನೀಡಿತ್ತು.