ಚುನಾವಣೆಗಾಗಿ ಭಾರತಕ್ಕೆ ಬೈಡೆನ್ ಸರಕಾರದಿಂದ 18 ಮಿಲಿಯನ್ ಡಾಲರ್ ದೇಣಿಗೆ: ಆರೋಪ ಪುನರುಚ್ಚರಿಸಿದ ಟ್ರಂಪ್
ಭಾರತ ಅಮೆರಿಕದಿಂದ ಚೆನ್ನಾಗಿ ಪ್ರಯೋಜನ ಪಡೆಯುತ್ತಿದೆಯೆಂದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ | PC : PTI
ವಾಶಿಂಗ್ಟನ್: ಭಾರತದಲ್ಲಿ ಮತದಾನವನ್ನು ಉತ್ತೇಜಿಸಲು ಹಿಂದಿನ ಬೈಡೆನ್ ಸರಕಾರವು 18 ಮಿಲಿಯ ಡಾಲರ್ ದೇಣಿಗೆಯನ್ನು ಭಾರತಕ್ಕೆ ನೀಡಿದೆಯೆಂಬ ತನ್ನ ಆರೋಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸತತ ನಾಲ್ಕನೇ ದಿನವೂ ಪುನರುಚ್ಚರಿಸಿದ್ದಾರೆ.
ಭಾರತಕ್ಕೆ ಅಮೆರಿಕವು ಈ ದೇಣಿಗೆಯನ್ನು ನೀಡುವ ಅಗತ್ಯವಿಲ್ಲವೆಂದು ಅವರು ಪ್ರತಿಪಾದಿಸಿದ್ದಾರೆ.
ಶನಿವಾರ ಕನ್ಸರ್ವೇಟಿವ್ ರಾಜಕೀಯ ಕ್ರಿಯಾ ಸಮಾವೇಶ (ಸಿಪಿಎಸಿ)ದಲ್ಲಿ ಭಾಷಣ ಮಾಡಿದ ಅವರು, ಭಾರತವು ಅಮೆರಿಕದಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
‘‘ ಭಾರತದ ಚುನಾವಣೆಗಳಿಗಾಗಿ ಆ ದೇಶಕ್ಕೆ 18 ಮಿಲಿಯನ್ ಡಾಲರ್ ಗಳನ್ನು ನೀಡಲಾಗಿತ್ತು. ಇದು ಯಾಕೆ ಬೇಕು? ನಾವು ಯಾಕೆ ಹಳೆಯ ಮತಪತ್ರಗಳ ಮೂಲಕ ನಡೆಸುವ ಚುನಾವಣೆಗೆ ಮರಳಬಾರದು ಮತ್ತು ಚುನಾವಣೆ ನಡೆಸಲು ಅವರ ಭಾರತದ ನೆರವನ್ನು ಯಾಕೆ ಪಡೆಯಬಾರದು ಎಂದವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಭಾರತಕ್ಕೆ ನಾವು ಚುನಾವಣೆಗಳಿಗಾಗಿ ಹಣವನ್ನು ನೀಡುತ್ತಿದ್ದೇವೆ. ಅವರಿಗೆ ಹಣದ ಅಗತ್ಯವಿಲ್ಲ’’ ಎಂದು ಟ್ರಂಪ್ ಹೇಳಿದರು.
‘‘ಅವರು (ಭಾರತ) ನಮ್ಮಿಂದ ಚೆನ್ನಾಗಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಭಾರತವು ಜಗತ್ತಿನ ಅತ್ಯಧಿಕ ಸುಂಕ ವಿಧಿಸುವ ರಾಷ್ಟ್ರಗಳಲ್ಲೊಂದಾಗಿದೆ. ಆ ದೇಶದಲ್ಲಿ ನಮ್ಮ ಉತ್ಪನ್ನಗಳಿಗೆ 200 ಶೇ. ಸುಂಕವನ್ನು ವಿಧಿಸಲಾಗುತ್ತದೆ ಮತ್ತು ಅವರ ಚುನಾವಣೆಗೆ ನೆರವಾಗಲು ನಾವು ಅವರಿಗೆ ಅಪಾರ ಹಣವನ್ನು ನೀಡುತ್ತಿದ್ದೇವೆ’’ ಎಂದು ಟ್ರಂಪ್ ಹೇಳಿದರು.
ಯುಎಸ್ಏಯ್ಡ್ ಏಜೆನ್ಸಿಯ ಮುಖಾಂತರ ಬಾಂಗ್ಲಾದೇಶಕ್ಕೆ 29 ಮಿಲಿಯ ಡಾಲರ್ಗಳ ನೆರವನ್ನು ನೀಡುತ್ತಿರುವುದನ್ನು ಕೂಡಾ ಟ್ರಂಪ್ ಟೀಕಿಸಿದರು.
ಹಿಂದಿನ ಬೈಡೆನ್ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುಎಸ್ಏಯ್ಡ್ ಏಜೆನ್ಸಿಯು, ಮತದಾನವನ್ನು ಉತ್ತೇಜಿಸಲು ಭಾರತಕ್ಕೆ 21 ದಶಲಕ್ಷ ಡಾಲರ್ ದೇಣಿಗೆ ನೀಡಿತ್ತೆಂಬ ಹೇಳಿಕೆಯನ್ನು ಟ್ರಂಪ್ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಪುನರುಚ್ಚರಿಸುತ್ತಾ ಬಂದಿದ್ದಾರೆ.
ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಅಮೆರಿಕದ ಹಸ್ತಕ್ಷೇಪವಿರುವ ಬಗ್ಗೆ ಟ್ರಂಪ್ ಸರಕಾರ ನೀಡಿರುವ ಮಾಹಿತಿ ಕಳವಳಕಾರಿಯೆಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶನಿವಾರ ಪ್ರತಿಕ್ರಿಯಿಸಿದ್ದರು.
‘‘ಭಾರತದಲ್ಲಿ ವಿಶ್ವಸನೀಯವಾದಂತಹ ಕೆಲಸಗಳನ್ನು ನಡೆಸುವುದಕ್ಕಾಗಿ ಯುಎಸ್ಏಯ್ಡ್ ಏಜೆನ್ಸಿಗೆ ಭಾರತದಲ್ಲಿ ಕಾರ್ಯಾಚರಿಸಲು ಅವಕಾಶ ನೀಡಲಾಗಿತ್ತು. ಆದರೆ ಇಲ್ಲಿ ಅದು ವಿಶ್ವಾಸಯುತವಲ್ಲದ ಚಟುವಟಿಕೆಗಳನ್ನು ನಡೆಸಿದೆ’’ ಎಂದು ಜೈಶಂಕರ್ ಅವರು ಹೇಳಿದ್ದರು.