ವೇಶ್ಯೆಯಾಗಿ ವೃತ್ತಿಜೀವನ ಆರಂಭಿಸಿದ ಕಮಲಾ ಹ್ಯಾರಿಸ್ : ಟ್ರಂಪ್ ಬೆಂಬಲಿಗರ ಲೇವಡಿ
ಡೊನಾಲ್ಡ್ ಟ್ರಂಪ್ | PC : PTI
ನ್ಯೂಯಾರ್ಕ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭಗೊಳ್ಳುತ್ತಿರುವಂತೆಯೇ ಅಭ್ಯರ್ಥಿಗಳ ಪ್ರಚಾರದ ಅಬ್ಬರವೂ ತಾರಕಕ್ಕೇರಿದೆ.
ರವಿವಾರ ನ್ಯೂಯಾರ್ಕ್ನ ಮ್ಯಾಡಿಸನ್ ಗಾರ್ಡನ್ನಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಒರಟು, ಜನಾಂಗೀಯ ನಿಂದನೆಯ ಪದ ಬಳಸಿರುವುದಾಗಿ ವರದಿಯಾಗಿದೆ.
ಟ್ರಂಪ್ ಪ್ರಚಾರ ತಂಡದ ಸದಸ್ಯರೊಬ್ಬರು ಮಾತನಾಡಿ ` ಡೆಮಾಕ್ರಟಿಕ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಒಂದು ಪಿಶಾಚಿ. ಅಮೆರಿಕದ ಪ್ರಥಮ ಮಹಿಳೆಯಾಗಲು ಮತ್ತು ಅಧ್ಯಕ್ಷೆಯಾದ ಪ್ರಥಮ ಕಪ್ಪು ಮಹಿಳೆ ಎಂಬ ದಾಖಲೆ ಬರೆಯಲು ಬಯಸಿರುವ ಈಕೆ ವೇಶ್ಯೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ' ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್ ಅವರ ಬಾಲ್ಯಕಾಲದ ಮಿತ್ರ ಡೇವಿಡ್ ರೆಮ್ `ಹ್ಯಾರಿಸ್ ಒಂದು ದೆವ್ವ ಮತ್ತು ಕ್ರೈಸ್ತ ವಿರೋಧಿ' ಎಂದು ಟೀಕಿಸಿದರೆ, ಉದ್ಯಮಿ ಗ್ರಾಂಟ್ ಕಾರ್ಡೋನ್ `ಹ್ಯಾರಿಸ್ ಮತ್ತವರ ತಲೆಹಿಡುಕರ ತಂಡವು ನಮ್ಮ ದೇಶವನ್ನು ನಾಶಗೊಳಿಸಲಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.