ಟ್ರಂಪ್ ಅವರ ನೀತಿಗಳಿಂದ ಯಾರೂ ಸುರಕ್ಷಿತವಾಗಿಲ್ಲ: ಕೆನಡಾ ಎಚ್ಚರಿಕೆ

Photo : freepik
ಒಟ್ಟಾವ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದ ಯಾರೂ ಸುರಕ್ಷಿತವಾಗಿಲ್ಲ. ಅಮೆರಿಕದ ಬಲಾತ್ಕಾರ, ಬಲವಂತದ ಕ್ರಮಗಳಿಗೆ ಕೆನಡಾ ಬಗ್ಗುವುದಿಲ್ಲ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.
ಗುರುವಾರ ಕೆನಡಾದಲ್ಲಿ ಆರಂಭಗೊಂಡ ಜಿ7 ದೇಶಗಳ ವಿದೇಶಾಂಗ ಸಚಿವರ ಸಭೆಗೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಮೆಲಾನಿ ಜೋಲಿ `ನಿಕಟ ಸ್ನೇಹಿತನಾದ ನಮ್ಮ ವಿರುದ್ಧವೇ ಅಮೆರಿಕ ಹೀಗೆ ಮಾಡುತ್ತದೆ ಎಂದಾದರೆ ಯಾರೊಬ್ಬರೂ ಸುರಕ್ಷಿತವಾಗಿಲ್ಲ' ಎಂದರು. ಕೆನಡಾ ತನ್ನ ಸಾರ್ವಭೌಮತ್ವದ ರಕ್ಷಣೆಗಾಗಿ ಮತ್ತು ರಕ್ಷಣಾ ಸಾಧನಗಳಿಗಾಗಿ ಯುರೋಪ್ನೊಂದಿಗೆ ಸಹಕರಿಸುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ.
ಜಿ7 ಸಭೆಯ ಅಧಿಕೃತ ಕಾರ್ಯಸೂಚಿಯು ಉಕ್ರೇನ್ , ಮಧ್ಯಪ್ರಾಚ್ಯ, ಹೈಟಿ ಮತ್ತು ವೆನೆಝುವೆಲಾದ ಮೇಲೆ ಕೇಂದ್ರೀಕರಿಸಿದರೂ, ಅಮೆರಿಕದ ಸುಂಕ ಹಾಗೂ ತನ್ನ ದೇಶದ ಸಾರ್ವಭೌಮತ್ವಕ್ಕೆ ಎದುರಾಗಿರುವ ಬೆದರಿಕೆಗಳನ್ನು ಸದಸ್ಯ ದೇಶಗಳ ಪ್ರತಿನಿಧಿಗಳ ಗಮನಕ್ಕೆ ತರುವುದಾಗಿ ಜೋಲಿ ಹೇಳಿದ್ದಾರೆ. ಕೆನಡಾದ ಸ್ಟೀಲ್ ಮತ್ತು ಅಲ್ಯುಮೀನಿಯಂ ಮೇಲೆ ಟ್ರಂಪ್ 25% ಸುಂಕ ವಿಧಿಸಿದ್ದರೆ ಪ್ರತಿಕ್ರಮವಾಗಿ ಅಮೆರಿಕದ ಸರಕುಗಳ ಮೇಲೆ 20 ಶತಕೋಟಿ ಡಾಲರ್ ಮೊತ್ತದಷ್ಟು ಸುಂಕವನ್ನು ಕೆನಡಾ ಘೋಷಿಸಿದೆ. ಕೆನಡಾ ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ಟ್ರಂಪ್ ಪದೇ ಪದೇ ಪ್ರಸ್ತಾಪಿಸುತ್ತಿರುವುದನ್ನು ಕೆನಡಾ ಸರಕಾರ ಖಂಡಿಸಿದೆ.