ಬೈಡನ್ ಆಡಳಿತವನ್ನು ಹಿಟ್ಲರ್ ನ ಗೆಸ್ಟಾಪೋಗೆ ಹೋಲಿಸಿದ ಟ್ರಂಪ್
Photo: NDtv
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಮೆರಿಕದ ನ್ಯಾಯಾಂಗ ವ್ಯವಸ್ಥೆಯನ್ನು ತನ್ನ ವಿರುದ್ಧದ ಆಯುಧವಾಗಿ ಪರಿವರ್ತಿಸಿದ್ದಾರೆ. ಬೈಡನ್ ಅವರ ತಂತ್ರಗಳು ಹಿಟ್ಲರ್ ನ ಗೆಸ್ಟಪೋ(ಗುಪ್ತ ಪೊಲೀಸ್ ಪಡೆ)ದ ತಂತ್ರವನ್ನು ಹೋಲುತ್ತದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
ಡೆಮೊಕ್ರಟಿಕ್ ಪಕ್ಷದವರು ಗೆಸ್ಟಪೋ ಆಡಳಿತದಿಂದ ಸ್ಫೂರ್ತಿ ಪಡೆದಿದ್ದಾರೆ. ಹೀಗೆ ಮಾಡಿದರೆ ಮಾತ್ರ ಅವರು ಗೆಲ್ಲುವ ಸಾಧ್ಯತೆಯಿದೆ ಎಂದು ಟ್ರಂಪ್ ಹೇಳಿದಾಗ ಸಭೆಯಲ್ಲಿದ್ದವರು ಕರತಾಡನ ಮಾಡಿ ಶ್ಲಾಘಿಸಿದರು ಎಂದು ವರದಿಯಾಗಿದೆ. ಚುನಾವಣಾ ಪ್ರಚಾರ ಅಭಿಯಾನದ ಸಂದರ್ಭ ಟ್ರಂಪ್ ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು `ಕ್ರಿಮಿ ಕೀಟಗಳು, ಜಂತುಗಳು' ಎಂದು ಕರೆದಿರುವುದು ಮತ್ತು ವಲಸಿಗರನ್ನು ಪ್ರಾಣಿಗಳಿಗೆ ಹೋಲಿಸಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಅಭ್ಯರ್ಥಿಯಾಗಿ ಮತ್ತು ಜೋ ಬೈಡನ್ ಡೆಮೊಕ್ರಟಿಕ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.