ಪ್ರಾಥಮಿಕ ಅಧ್ಯಕ್ಷೀಯ ಚುನಾವಣೆಯಿಂದ ಟ್ರಂಪ್ ಅನರ್ಹ: ಕೊಲೊರಡೊ ಕೋರ್ಟ್ ಮಹತ್ವದ ತೀರ್ಪು
Photo:PTI
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟೋಲ್ (ಸಂಸತ್ತು) ಕಟ್ಟಡದ ಮೇಲೆ 2021ರಲ್ಲಿ ನಡೆಸಿದ ದಾಳಿ ಪ್ರಕರಣದಲ್ಲಿ ಟ್ರಂಪ್ ವಹಿಸಿದ್ದ ಪಾತ್ರದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ, ಕೊಲೊರಡೊ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ತೀರ್ಪಿನ ಹಿನ್ನೆಲೆಯಲ್ಲಿ ಅಮೆರಿಕದ ಸಂವಿಧಾನದ ತೀರಾ ಅಪರೂಪಕ್ಕೆ ಬಳಸಲಾಗುವ ನಿಬಂಧನೆಯಡಿ ಅನರ್ಹಗೊಂಡ ಮೊದಲ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾಗಿದ್ದಾರೆ. ಈ ನಿಬಂಧನೆಯಡಿ ದಂಗೆ ಅಥವಾ ಬಂಡಾಯ ನಡೆಸುವಲ್ಲಿ ಷಾಮೀಲಾದ ವ್ಯಕ್ತಿಗಳು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸುವುದನ್ನು ತಡೆಯಲಾಗುತ್ತದೆ.
ಅಮೆರಿಕ ಸರ್ಕಾರದ ವಿರುದ್ಧ ಹಿಂಸೆಯನ್ನು ಪ್ರಚೋದಿಸಿದ ಕಾರಣಕ್ಕಾಗಿ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಉಮೇದುವಾರಿಕೆಯ ಮುಂಚೂಣಿಯಲ್ಲಿದ್ದ ಟ್ರಂಪ್ ಅವರನ್ನು ಅಮೆರಿಕದ ಸಂವಿಧಾನ ನಿಷೇಧಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸದ್ಯಕ್ಕೆ ಈ ತೀರ್ಪು, ದೇಶದಲ್ಲಿ ಮಾರ್ಚ್ 5ರಂದು ನಡೆಯುವ ರಿಪಬ್ಲಿಕನ್ ಪ್ರಾಥಮಿಕ ಚುನಾವಣೆಗೆ ಮಾತ್ರ ಪರಿಣಾಮ ಬೀರದೆ, ನವೆಂಬರ್ 6ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೇಲೂ ಪರಿಣಾಮ ಬೀರುವ ನಿರೀಕ್ಷೆ ಇದೆ.
ಕೊಲೊರಡೊ ಮತದಾರರ ಒಂದು ಗುಂಪು ಈ ಪ್ರಕರಣವನ್ನು ಕೋರ್ಟ್ ಕಟಕಟೆಗೆ ತಂದಿದ್ದು, ವಾಷಿಂಗ್ಟನ್ ನ ಸಿಟಿಝನ್ಸ್ ಫಾರ್ ರೆಸ್ಪಾನ್ಸಿಬಿಲಿಟಿ ಅಂಡ್ ಎಥಿಕ್ಸ್ ಇದನ್ನು ಬೆಂಬಲಿಸಿತ್ತು. ಕ್ಯಾಪಿಟೋಲ್ ಮೆಲೆ ನಡೆದ ದಾಳಿಯಲ್ಲಿ ಹಿಂಸೆಗೆ ಕುಮ್ಮಕ್ಕು ನೀಡಿದ ಟ್ರಂಪ್ ಅವರನ್ನು ಅನರ್ಹಗೊಳಿಸಬೇಕು ಎಂದು ವಾದಿಸಲಾಗಿತ್ತು.