ಟ್ರಂಪ್ ಗಾಝಾ ಯೋಜನೆ ಜಗತ್ತನ್ನು ವಸಾಹತು ಯುಗದ ಕರಾಳ ದಿನಕ್ಕೆ ಹಿಂದಿರುಗಿಸುತ್ತದೆ: ವಿಶ್ವಸಂಸ್ಥೆ ತಜ್ಞರ ಗುಂಪು ಎಚ್ಚರಿಕೆ

ಸಾಂದರ್ಭಿಕ ಚಿತ್ರ | PC : PTI
ನ್ಯೂಯಾರ್ಕ್: ಅಮೆರಿಕ ಗಾಝಾದ ನಿಯಂತ್ರಣವನ್ನು ಪಡೆಯಬೇಕು ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯನ್ನು ವಿಶ್ವಸಂಸ್ಥೆಯ ತಜ್ಞರ ಗುಂಪು ಖಂಡಿಸಿದ್ದು ಇಂತಹ ಕ್ರಮವು `ಪರಭಕ್ಷಕ ಅವ್ಯವಸ್ಥೆಯ' ಹೊಸ ಯುಗವನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಅಗತ್ಯಬಿದ್ದರೆ ಮಿಲಿಟರಿ ಬಲ ಬಳಸಿ ಗಾಝಾದ ಫೆಲೆಸ್ತೀನಿಯನ್ ಜನಸಂಖ್ಯೆಯನ್ನು ಸ್ಥಳಾಂತರಿಸಬಹುದು ಎಂಬ ಟ್ರಂಪ್ ಪ್ರಸ್ತಾಪವನ್ನು ಉಲ್ಲೇಖಿಸಿದ ತಜ್ಞರು ` ಪ್ರಮುಖ ಶಕ್ತಿಯಿಂದ ಇಂತಹ ಬಹಿರಂಗ ಉಲ್ಲಂಘನೆಯು ಮಿಲಿಟರಿ ಆಕ್ರಮಣಶೀಲತೆಯ ಜಾಗತಿಕ ನಿಷೇಧವನ್ನು ಮುರಿಯುತ್ತದೆ ಮತ್ತು ಜಾಗತಿಕವಾಗಿ ಶಾಂತಿ ಮತ್ತು ಮಾನವ ಹಕ್ಕುಗಳಿಗೆ ವಿನಾಶಕಾರಿ ಪರಿಣಾಮಗಳೊಂದಿಗೆ ವಿದೇಶಿ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಇತರ ಪರಭಕ್ಷಕ ದೇಶಗಳಿಗೆ ಧೈರ್ಯ ತುಂಬುತ್ತದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಪ್ರಸ್ತಾಪವನ್ನು ಜಾರಿಗೊಳಿಸುವುದು ಅಂತರಾಷ್ಟ್ರೀಯ ವ್ಯವಸ್ಥೆಯ ಅತ್ಯಂತ ಮೂಲಭೂತ ನಿಯಮವನ್ನು ಮತ್ತು ವಿಶ್ವಸಂಸ್ಥೆಯ ಸನದು(ಚಾರ್ಟರ್) ಅನ್ನು ಚೂರು ಚೂರಾಗಿಸುತ್ತದೆ(ದುರಂತಮಯ ಎರಡನೆಯ ವಿಶ್ವಯುದ್ಧ ಮತ್ತು ಹತ್ಯಾಕಾಂಡದ ನಂತರ ವಿಶ್ವಸಂಸ್ಥೆಯ ಸನದನ್ನು ರೂಪಿಸುವಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿತ್ತು) ಮತ್ತು ಜಗತನ್ನು ವಸಾಹತುಶಾಹಿ ವಿಜಯದ ಕರಾಳ ದಿನದತ್ತ ಜಗತ್ತನ್ನು ಕೊಂಡೊಯ್ಯಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಿದೇಶಿ ನೆಲವನ್ನು ಬಲಪ್ರಯೋಗಿಸಿ ಸ್ವಾಧೀನಪಡಿಸಿಕೊಳ್ಳುವುದು, ಅಲ್ಲಿನ ನಿವಾಸಿಗಳನ್ನು ಬಲವಂತದಿಂದ ಸ್ಥಳಾಂತರಿಸುವುದು, ಫೆಲೆಸ್ತೀನಿಯನ್ ಜನರಿಗೆ ಸ್ವನಿರ್ಣಯದ ಹಕ್ಕನ್ನು ನಿರಾಕರಿಸುವುದು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ. ಇಂತಹ ಉಲ್ಲಂಘನೆಗಳು ಅಂತರಾಷ್ಟ್ರೀಯ ನ್ಯಾಯ ವ್ಯವಸ್ಥೆಯನ್ನು ಮತ್ತು ಸ್ಥಿರತೆಯನ್ನು ಬದಲಾಯಿಸಲಿದೆ ಮತ್ತು `ಬಲಿಷ್ಟರ ಆಡಳಿತ' ಎಂಬ ಕಾನೂನುಬಾಹಿರ ವ್ಯವಸ್ಥೆಗೆ ಕಾರಣವಾಗಲಿದೆ ಎಂದು ವಿಶ್ವಸಂಸ್ಥೆಯ 30ಕ್ಕೂ ಅಧಿಕ ತಜ್ಞರ ಗುಂಪು ಹೇಳಿದೆ.
ಫೆಲೆಸ್ತೀನ್ ಪ್ರದೇಶವನ್ನು ಇಸ್ರೇಲ್ ಸ್ವಾಧೀನಪಡಿಸಿಕೊಂಡ 50 ವರ್ಷಗಳು ಇಸ್ರೇಲ್ ಅಥವಾ ಫೆಲೆಸ್ತೀನ್ ಗೆ ಶಾಂತಿ ಅಥವಾ ಭದ್ರತೆಯನ್ನು ತರಲು ವಿಫಲವಾಗಿದೆ. ಹೀಗಿರುವಾಗ ಅಮೆರಿಕದ ಸ್ವಾಧೀನಕ್ಕೆ ಬಂದರೆ ಇದೇ ವಿನಾಶಕಾರಿ ಫಲಿತಾಂಶಕ್ಕೆ, ಅಂತ್ಯವಿಲ್ಲದ ಸಂಘರ್ಷಕ್ಕೆ, ಸಾವು ಮತ್ತು ವಿನಾಶದ ಪ್ರಕ್ರಿಯೆ ಮುಂದುವರಿಯಲಿದೆ. ಆಕ್ರಮಿತ ಪ್ರದೇಶಗಳಿಂದ ನಾಗರಿಕರ ಸಾಮೂಹಿಕ ಸ್ಥಳಾಂತರವನ್ನು 1949ರ ಜಿನೆವಾ ಸಮಾವೇಶದಡಿ ಯುದ್ಧಾಪರಾಧ ಎಂದು ಪರಿಗಣಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.