ಒತ್ತೆಯಾಳುಗಳ ಬಿಡುಗಡೆಗೊಳಿಸದಿದ್ದರೆ ಸಾಯುತ್ತೀರಿ; ಹಮಾಸ್ಗೆ ಟ್ರಂಪ್ `ಕಡೆಯ ಎಚ್ಚರಿಕೆ'

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ಗಾಝಾದಲ್ಲಿ ಒತ್ತೆಸೆರೆಯಲ್ಲಿ ಇರುವವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಹಮಾಸ್ಗೆ `ಕಡೆಯ ಎಚ್ಚರಿಕೆ' ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
`ಕೆಲಸ ಮುಗಿಸಲು ಅಗತ್ಯವಿರುವ ಎಲ್ಲವನ್ನೂ ನಾನು ಇಸ್ರೇಲ್ಗೆ ಕಳುಹಿಸುತ್ತೇನೆ. ನಾನು ಹೇಳಿದಂತೆ ನೀವು ಮಾಡದಿದ್ದರೆ ಹಮಾಸ್ನ ಒಬ್ಬ ಸದಸ್ಯನೂ ಸುರಕ್ಷಿತವಾಗಿರುವುದಿಲ್ಲ' ಎಂದು ಸಾಮಾಜಿಕ ವೇದಿಕೆಯಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ನರಕದ ದರ್ಶನವಾಗಲಿದೆ. ಜೀವಂತ ಇರುವ ಎಲ್ಲಾ ಒತ್ತೆಯಾಳುಗಳನ್ನು , ಮೃತಪಟ್ಟವರ ಮೃತದೇಹಗಳನ್ನು ತಕ್ಷಣ ಹಿಂದಿರುಗಿಸದಿದ್ದರೆ ಮುಂದಿನ ಪರಿಣಾಮಗಳಿಗೆ ನೀವೇ ನೇರ ಹೊಣೆ' ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಹಮಾಸ್ ಮುಖಂಡರಿಗೆ ಗಾಝಾ ತೊರೆಯಲು ಮತ್ತೊಂದು ಅವಕಾಶ ನೀಡುತ್ತೇವೆ ಎಂದೂ ಟ್ರಂಪ್ ಘೋಷಿಸಿದ್ದಾರೆ. `ಗಾಝಾದ ಜನತೆಯ ಗಮನಕ್ಕೆ: ಸುಂದರ ಭವಿಷ್ಯ ನಿಮಗಾಗಿ ಕಾಯುತ್ತಿದೆ, ಆದರೆ ನೀವು ಒತ್ತೆಯಾಳುಗಳನ್ನು ಇರಿಸಿಕೊಳ್ಳದಿದ್ದರೆ ಮಾತ್ರ. ನೀವು ಒತ್ತೆಯಾಳುಗಳನ್ನು ಇರಿಸಿಕೊಂಡರೆ ಸಾಯುತ್ತೀರಿ' ಎಂದು ಮತ್ತೊಂದು ಪೋಸ್ಟ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
`ಇಂತಹ ಹೇಳಿಕೆಗಳ ಮೂಲಕ ಅಮೆರಿಕ ಅಧ್ಯಕ್ಷರು ಈಗ ಜಾರಿಯಲ್ಲಿರುವ ಕದನ ವಿರಾಮ ಒಪ್ಪಂದವನ್ನು ಮುರಿಯಲು ಇಸ್ರೇಲನ್ನು ಪ್ರೋತ್ಸಾಹಿಸುತ್ತಿದ್ದಾರೆ' ಎಂದು ಹಮಾಸ್ ಆರೋಪಿಸಿದೆ.
ಉಳಿದಿರುವ ಒತ್ತೆಯಾಳುಗಳ ಕುರಿತು ಹಮಾಸ್ ಜತೆ ನೇರ ಮಾತುಕತೆ ನಡೆಸುತ್ತಿರುವುದಾಗಿ ಶ್ವೇತಭವನ ದೃಢಪಡಿಸಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ತಾನು ಉಗ್ರ ಸಂಘಟನೆಯೆಂದು ಗುರುತಿಸಿದ ಗುಂಪಿನ ಜತೆ ನೇರ ಮಾತುಕತೆ ನಡೆಸುವುದು ಅಮೆರಿಕದ ನೀತಿಗೆ ವಿರುದ್ಧವಾಗಿರುವುದರಿಂದ ಹಮಾಸ್ ಜತೆಗೆ ನೇರ ಮಾತುಕತೆಯನ್ನು ಇದುವರೆಗೆ ಅಮೆರಿಕ ನಿರಾಕರಿಸುತ್ತಾ ಬಂದಿತ್ತು.
ಹಮಾಸ್ಗೆ ಟ್ರಂಪ್ ಬೆದರಿಕೆ ಒಡ್ಡುತ್ತಿರುವುದು ಇದು ಪ್ರಥಮ ಬಾರಿಯಲ್ಲ. ತಾನು ಅಧಿಕಾರ ವಹಿಸಿಕೊಳ್ಳುವ ಮುನ್ನ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಪರಿಣಾಮ ಭೀಕರವಾಗಿರುತ್ತದೆ ಎಂದು ಡಿಸೆಂಬರ್ ನಲ್ಲಿ ಟ್ರಂಪ್ ಹೇಳಿದ್ದರು. ಈ ಮಧ್ಯೆ, ಒತ್ತೆಯಾಳುಗಳ ಬಿಡುಗಡೆ ನಿಟ್ಟಿನಲ್ಲಿ ಅಮೆರಿಕ ಹಮಾಸ್ ಜತೆ ನೇರ ಮಾತುಕತೆ ನಡೆಸುತ್ತಿದೆ. ಮಾತುಕತೆಗೂ ಮುನ್ನ ಇಸ್ರೇಲ್ ಅನ್ನು ಸಂಪರ್ಕಿಸಲಾಗಿದೆ. ಅಮೆರಿಕನ್ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಟ್ರಂಪ್ ಕ್ರಮ ಕೈಗೊಳ್ಳುತ್ತಿದ್ದಾರೆ. ಮಧ್ಯಪ್ರಾಚ್ಯ ವ್ಯವಹಾರಕ್ಕೆ ಸಂಬಂಧಿಸಿದ ವಿಶೇಷ ಪ್ರತಿನಿಧಿ ಆಡಂ ಬೊಹ್ಲರ್ ಅವರ ಕೆಲಸವು ಅಮೆರಿಕನ್ ಜನತೆಗೆ ಸೂಕ್ತವಾದುದನ್ನು ಮಾಡುವ ಉತ್ತಮ ಪ್ರಯತ್ನವಾಗಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೊಲಿನ್ ಲಿವಿಟ್ ಹೇಳಿದ್ದಾರೆ.
ಖತರ್ ನಲ್ಲಿ ಹಮಾಸ್ ಮತ್ತು ಅಮೆರಿಕ ಅಧಿಕಾರಿಗಳ ನಡುವೆ ಎರಡು ಸುತ್ತಿನ ನೇರ ಮಾತುಕತೆ ನಡೆದಿದೆ ಎಂದು ಫೆಲೆಸ್ತೀನ್ ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
►59 ಒತ್ತೆಯಾಳುಗಳು
2023ರ ಅಕ್ಟೋಬರ್ 7ರಂದು ಇಸ್ರೇಲ್ನೊಳಗೆ ನುಗ್ಗಿದ್ದ ಹಮಾಸ್ ಸಶಸ್ತ್ರ ಹೋರಾಟಗಾರರು 251 ಮಂದಿಯನ್ನು ಅಪಹರಿಸಿ ಗಾಝಾದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇವರಲ್ಲಿ 59 ಒತ್ತೆಯಾಳುಗಳು ಇನ್ನೂ ಗಾಝಾದಲ್ಲಿ ಒತ್ತೆಸೆರೆಯಲ್ಲಿದ್ದು ಇವರಲ್ಲಿ 25 ಮಂದಿ ಮೃತಪಟ್ಟಿರುವುದಾಗಿ ನಂಬಲಾಗಿದೆ. ಒತ್ತೆಸೆರೆಯಲ್ಲಿ ಇರುವವರಲ್ಲಿ ಐವರು ಅಮೆರಿಕನ್ ಪ್ರಜೆಗಳಿದ್ದು ಒಬ್ಬ ಮಾತ್ರ ಜೀವಂತ ಇರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
► ಟ್ರಂಪ್ ಬೆದರಿಕೆ ತಳ್ಳಿಹಾಕಿದ ಹಮಾಸ್
ಟ್ರಂಪ್ ಬೆದರಿಕೆಯು ಗಾಝಾ ಕದನ ವಿರಾಮ ಒಪ್ಪಂದದಿಂದ ತಪ್ಪಿಸಿಕೊಳ್ಳಲು ಮತ್ತು ಗಾಝಾದ ಮೇಲಿನ ಮುತ್ತಿಗೆಯನ್ನು ತೀವ್ರಗೊಳಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಪ್ರೋತ್ಸಾಹಿಸುತ್ತದೆ ಎಂದು ಹಮಾಸ್ ಗುರುವಾರ ಪ್ರತಿಕ್ರಿಯಿಸಿದೆ.
ಇಂತಹ ಬೆದರಿಕೆಗಳು ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳನ್ನು ಜಟಿಲಗೊಳಿಸುತ್ತದೆ. ಗಾಝಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾದರೆ ಮಾತ್ರ ಉಳಿದ ಒತ್ತೆಯಾಳುಗಳು ಬಿಡುಗಡೆಗೊಳ್ಳುತ್ತಾರೆ ಎಂದು ಹಮಾಸ್ ಹೇಳಿದೆ.
ಕದನ ವಿರಾಮ ಒಪ್ಪಂದದ ಎರಡನೇ ಹಂತಕ್ಕೆ ಸಾಗುವುದು ಮತ್ತು ಮಧ್ಯಸ್ಥಿಕೆದಾರರ ಉಪಸ್ಥಿತಿಯಲ್ಲಿ ಸಹಿ ಹಾಕಿದ ಒಪ್ಪಂದಕ್ಕೆ ಇಸ್ರೇಲ್ ಬದ್ಧವಾಗಿರುವುದು ಉಳಿದ ಒತ್ತೆಯಾಳುಗಳ ಬಿಡುಗಡೆಗೆ ಇರುವ ಉತ್ತಮ ಮಾರ್ಗವಾಗಿದೆ ಎಂದು ಹಮಾಸ್ ವಕ್ತಾರರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.