ಜನವಸತಿಯೇ ಇಲ್ಲದ ದ್ವೀಪದ ಮೇಲೂ ಶೇ.10 ಸುಂಕ ಹೇರಿದ ಟ್ರಂಪ್!
PC: x.com/Aisha20023147
ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾನು ಬಣ್ಣಿಸಿದ್ದ ‘ವಿಮೋಚನಾ ದಿನ ಸುಂಕಗಳನ್ನು’ ಘೋಷಿಸಲು ಬುಧವಾರ ಶ್ವೇತ ಭವನದ ರೋಸ್ ಗಾರ್ಡನ್ಗೆ ಆಗಮಿಸಿದಾಗ ಹಲವಾರು ದೇಶಗಳು ಕೆಲವು ಕಠಿಣ ಕ್ರಮಗಳಿಗೆ ಸಿದ್ಧವಾಗಿದ್ದವು. ಆದರೆ ಟ್ರಂಪ್ ಕೆಂಗಣ್ಣಿಗೆ ಜನವಸತಿಯೇ ಇಲ್ಲದ ದ್ವೀಪವೂ ಗುರಿಯಾಗಲಿದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.
ಎಲ್ಲ ವ್ಯಾಪಾರ ಪಾಲುದಾರರ ಮೇಲೆ ಶೇ.10ರಷ್ಟು ಮೂಲಸುಂಕವನ್ನು ವಿಧಿಸುವ ಜೊತೆಗೆ ಟ್ರಂಪ್ ಆಡಳಿತದ ಪಟ್ಟಿಯಲ್ಲಿ ಸಬ್-ಅಂಟಾರ್ಕ್ಟಿಕ್ ಹಿಂದು ಮಹಾಸಾಗರದಲ್ಲಿರುವ ಜನವಸತಿಯಿಲ್ಲದ ಹರ್ಡ್ ಮತ್ತು ಮೆಕ್ಡೊನಾಲ್ಡ್ ದ್ವೀಪಗಳೂ ಸೇರಿವೆ. ಹೌದು,ಅಲ್ಲಿ ಯಾರೂ ವಾಸಿಸುವುದಿಲ್ಲ.
ಈ ದ್ವೀಪಗಳು ಆಸ್ಟ್ರೇಲಿಯಾದ ಪ್ರದೇಶವಾಗಿರುವುದರಿಂದ ಅವುಗಳನ್ನು ಸೇರಿಸಲಾಗಿದೆ ಎಂದು ಶ್ವೇತಭವನದ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಆಸ್ಟ್ರೇಲಿಯಾ ಸರಕಾರದ ವೆಬ್ಸೈಟ್ನಲ್ಲಿ ಒದಗಿಸಲಾಗಿರುವ ಮಾಹಿತಿಯು ಹರ್ಡ್ ಮತ್ತು ಮೆಕ್ಡೊನಾಲ್ಡ್ ದ್ವೀಪಗಳನ್ನು ‘ಭೂಮಿಯ ಮೇಲಿನ ಅತ್ಯಂತ ಕಾಡು ಮತ್ತು ದುರ್ಗಮ ಪ್ರದೇಶಗಳಲ್ಲಿ ಒಂದಾಗಿದೆ’ ಎಂದು ಬಣ್ಣಿಸಿದೆ.
ಆಸ್ಟ್ರೇಲಿಯನ್ ಅಂಟಾರ್ಕ್ಟಿಕ್ ಪ್ರೋಗ್ರಾಂ ಪ್ರಕಾರ,ಪಶ್ಚಿಮ ಆಸ್ಟ್ರೇಲಿಯಾದ ಪರ್ತ್ ಸಮೀಪದ ಫ್ರಿಮ್ಯಾಂಟಲ್ ಬಂದರಿನಿಂದ ಹಡಗಿನ ಮೂಲಕ ಹರ್ಡ್ ದ್ವೀಪವನ್ನು ತಲುಪಲು ಹವಾಮಾನವನ್ನು ಅವಲಂಬಿಸಿ ಸುಮಾರು 10 ದಿನಗಳು ಬೇಕಾಗುತ್ತವೆ. ಈ ದ್ವೀಪಗಳು ಪೆಂಗ್ವಿನ್,ಸೀಲ್ ಮತ್ತು ವಿವಿಧ ಪಕ್ಷಿಗಳ ಆವಾಸ ಸ್ಥಾನವಾಗಿದ್ದು,ಇವುಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಸಂರಕ್ಷಣಾ ಸ್ಥಾನಮಾನ ಹೊಂದಿರುವ ಹಲವಾರು ಪ್ರಭೇದಗಳು ಸೇರಿವೆ. ಕಳೆದ 10 ವರ್ಷಗಳಲ್ಲಿ ಈ ದ್ವೀಪಗಳಿಗೆ ಯಾರೂ ಭೇಟಿಯನ್ನೇ ನೀಡಿಲ್ಲ.
ಈ ದ್ವೀಪಗಳ ಮೇಲೆ ಸುಂಕ ವಿಧಿಸುವ ಟ್ರಂಪ್ ಘೋಷಣೆಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಆಲ್ಬನೀಸ್,ಭೂಮಿಯ ಯಾವುದೇ ಭಾಗವು ಸುರಕ್ಷಿತವಲ್ಲ ಎಂದು ಉದ್ಗರಿಸಿದರು.